ಬೆಂಗಳೂರು: ನಾಗರಿಕರ ಅಹವಾಲು ಆಲಿಸುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದ ಮೊದಲ ಹಂತದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಜ.3, 5 ಮತ್ತು 6ರಂದು ಬಿಬಿಎಂಪಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಾಗರಿಕರು ನಿಗದಿತ ದಿನದಂದು ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ಅಹವಾಲು ಸಲ್ಲಿಸಬಹುದು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಹಾಗೂ ಮಧ್ಯಾಹ್ನ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ದೂರುಗಳನ್ನು ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ (ಐಪಿಜಿಆರ್‌ಎಸ್) ಸಾಫ್ಟ್‌ವೇರ್‌ನಲ್ಲಿ ದಾಖಲಿಸಲು ಪಾಲಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನಾಗರಿಕರ ಸಂಪೂರ್ಣ ವಿವರ ಹಾಗೂ ದೂರುಗಳು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನು ದಾಖಲಿಸಲಾಗುತ್ತದೆ. ವೈ-ಫೈ, ಕಂಪ್ಯೂಟರ್, ಪ್ರಿಂಟರ್ ಹಾಗೂ ಸ್ಕ್ಯಾನರ್‌ಗಳ ವ್ಯವಸ್ಥೆಯೊಂದಿಗೆ 15 ಕೌಂಟರ್‌ಗಳನ್ನು ಸ್ಥಾಪಿಸಲಾಗಿರುತ್ತದೆ.
ಕಾರ್ಯಕ್ರಮದ ಸ್ಥಳದಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮಾಹಿತಿ ಒದಗಿಸುವ ನಾಮಫಲಕಗಳನ್ನು ಸಹ ಅಳವಡಿಸಲಾಗಿರುತ್ತದೆ. ಅಹವಾಲುಗಳನ್ನು ನೀಡಲು ಅನುವಾಗಲೆಂದು ನಾಗರಿಕರು ಟೋಕನ್‌ಗಳನ್ನು ಪಡೆಯಲು 10 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಅವಕಾಶವಿದೆ. ಸ್ಥಳೀಯ ಶಾಸಕರನ್ನೂ ಆಹ್ವಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಒಂದೇ ಸೂರಿನಡಿ ವಿವಿಧ ಇಲಾಖೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಅಬಿವೃದ್ಧಿ ಪ್ರಾಧಿಕಾರ ಬೆಸ್ಕಾಂ ಜಲಮಂಡಳಿ ಬಿಎಂಆರ್‌ಸಿಎಲ್ (ನಮ್ಮ ಮೆಟ್ರೊ) ಕೊಳೆಗೇರಿ ಅಭಿವೃದ್ಧಿ ಮಂಡಳಿ ಪೊಲೀಸ್ ಇಲಾಖೆ ಬಿಎಂಟಿಸಿ ಕಂದಾಯ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಇರಲಿದ್ದಾರೆ.
ಎಲ್ಲೆಲ್ಲಿ ಕಾರ್ಯಕ್ರಮ? ದಿನ; ವಿಧಾನಸಭೆ ಕ್ಷೇತ್ರ; ಸ್ಥಳ ಜನವರಿ 3; ಕೆ.ಆರ್ ಪುರ ಮಹದೇವಪುರ; ಐಟಿಐ ಕ್ರೀಡಾಂಗಣ ದೂರವಾಣಿ ನಗರ ಕೆ.ಆರ್. ಪುರ ಜನವರಿ 5; ಯಲಹಂಕ ಬ್ಯಾಟರಾಯನಪುರ ದಾಸರಹಳ್ಳಿ; ಡಾ. ಬಿ.ಆರ್ ಅಂಬೇಡ್ಕರ್ ಭವನ ಯಲಹಂಕ ನ್ಯೂ ಟೌನ್ ಜನವರಿ 6; ಹೆಬ್ಬಾಳ ಶಿವಾಜಿನಗರ ಪುಲಕೇಶಿನಗರ; ಆರ್‌ಬಿಎಎನ್‌ಎಂಎಸ್ ಹೈಸ್ಕೂಲ್ ಮೈದಾನ ಸೇಂಟ್ ಜಾನ್ಸ್ ರಸ್ತೆ ಶಿವನ್ ಚೆಟ್ಟಿ ಗಾರ್ಡನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.