ADVERTISEMENT

ಸೀರೆಯಿಂದ ಕತ್ತು ಬಿಗಿದು ಪತ್ನಿ ಕೊಲೆ: ಪತಿ ಬಂಧನ– ಕಾಮಾಕ್ಷಿಪಾಳ್ಯದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 14:50 IST
Last Updated 7 ಏಪ್ರಿಲ್ 2024, 14:50 IST
-
-   

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನೇತ್ರಾವತಿ (32) ಎಂಬುವವರನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ವೆಂಕಟೇಶ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಮಾಗಡಿ ತಾಲ್ಲೂಕಿನ ನೇತ್ರಾವತಿ ಹಾಗೂ ವೆಂಕಟೇಶ್, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ರಂಗನಾಥಪುರದಲ್ಲಿ ವಾಸವಿದ್ದರು. ದಂಪತಿಗೆ 8 ವರ್ಷಗಳ ಮಗನಿದ್ದಾನೆ. ಗಾರ್ಮೆಂಟ್ಸ್‌ ಕಾರ್ಖಾನೆಯೊಂದರಲ್ಲಿ ನೇತ್ರಾವತಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್, ನಗರದ ಕಂಪನಿಯೊಂದರ ಕ್ರೇನ್ ಆಪರೇಟರ್’ ಎಂದು ಪೊಲೀಸರು ಹೇಳಿದರು.

‘9 ವರ್ಷಗಳ ಹಿಂದೆ ನೇತ್ರಾವತಿ ಹಾಗೂ ವೆಂಕಟೇಶ್ ಮದುವೆಯಾಗಿದ್ದರು. ಮದ್ಯವ್ಯಸನಿಯಾಗಿದ್ದ ವೆಂಕಟೇಶ್, ನಿತ್ಯವೂ ಮದ್ಯ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ದುಡಿದ ಹಣವನ್ನೆಲ್ಲ ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದ. ಮದ್ಯ ಖರೀದಿಗೆ ಹಣ ಸಾಲದಿದ್ದಾಗ, ಪತ್ನಿಯನ್ನು ಕೇಳಿ ಪಡೆದುಕೊಳ್ಳುತ್ತಿದ್ದ’ ಎಂದು ತಿಳಿಸಿದರು.

ADVERTISEMENT

‘ನೇತ್ರಾವತಿ ಅವರು ಗಾರ್ಮೆಂಟ್ಸ್‌ ಕಾರ್ಖಾನೆ ಉದ್ಯೋಗದಿಂದ ಬಂದ ಹಣದಲ್ಲಿ ಮನೆ ನಡೆಸುತ್ತಿದ್ದರು. ಅದೇ ಹಣವನ್ನು ಕೊಡುವಂತೆ ಪತಿ ಒತ್ತಾಯಿಸುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಗಲಾಟೆ ಆಗುತ್ತಿತ್ತು. ಪತ್ನಿ ಮೇಲೆ ಹಲವು ಬಾರಿ ವೆಂಕಟೇಶ್ ಹಲ್ಲೆ ಮಾಡಿದ್ದನೆಂದು ಸ್ಥಳೀಯರು ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಉಸಿರುಗಟ್ಟಿ ಸಾವು

‘ನೇತ್ರಾವತಿ ಹಾಗೂ ವೆಂಕಟೇಶ್‌ ನಡುವೆ ಶನಿವಾರವೂ ಗಲಾಟೆ ಆಗಿತ್ತು. ಆರೋಪಿ ವೆಂಕಟೇಶ್‌, ಮನೆಯಿಂದ ಹೊರಗೆ ಹೋಗಿದ್ದ. ಪಾನಮತ್ತನಾಗಿ ರಾತ್ರಿ 11.30 ಗಂಟೆ ಸುಮಾರಿಗೆ ಮನೆಗೆ ವಾಪಸು ಬಂದಿದ್ದ. ನೇತ್ರಾವತಿ ಎಚ್ಚರವಿದ್ದರು. ಮಗ ಮಲಗಿದ್ದ’ ಎಂದು ಪೊಲೀಸರು ಹೇಳಿದರು.

‘ಪತ್ನಿ ಜೊತೆ ಜಗಳ ತೆಗೆದಿದ್ದ ಆರೋಪಿ, ಹಲ್ಲೆ ಮಾಡಿದ್ದ. ಮನೆಯಿಂದ ಹೊರಗೆ ಬಂದಿದ್ದ ನೇತ್ರಾವತಿ ಕೂಗಾಡಿದ್ದರು. ಅಕ್ಕ–ಪಕ್ಕದ ಮನೆಯವರು ದಂಪತಿಗೆ ಬುದ್ಧಿವಾದ ಹೇಳಿ ಒಳಗೆ ಕಳುಹಿಸಿದ್ದರು. ಪುನಃ ಜಗಳ ತೆಗೆದಿದ್ದ ಆರೋಪಿ, ನೇತ್ರಾವತಿ ಅವರ ಕುತ್ತಿಗೆಗೆ ಸೀರೆ ಸುತ್ತಿ ಬಿಗಿದಿದ್ದ. ಇದರಿಂದಾಗಿ ಉಸಿರುಗಟ್ಟಿ ನೇತ್ರಾವತಿ ಮೃತಪಟ್ಟಿದ್ದರು. ಮೃತದೇಹದ ಬಳಿಯೇ ಆರೋಪಿ ಮಲಗಿದ್ದ’ ಎಂದು ತಿಳಿಸಿದರು.

‘ಕುಟುಂಬಸ್ಥರು ಹಾಗೂ ಸ್ಥಳೀಯರು ನೀಡಿದ್ದ ಹೇಳಿಕೆ ಆಧರಿಸಿ ಪತಿ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಕೌಟುಂಬಿಕ ಜಗಳವೇ ಕೊಲೆಗೆ ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಅಳುತ್ತಾ ಹೊರಗೆ ಬಂದಿದ್ದ ಮಗ

‘ಭಾನುವಾರ ಬೆಳಿಗ್ಗೆ ಎಚ್ಚರಗೊಂಡಿದ್ದ ಮಗ ತಾಯಿ ನೇತ್ರಾವತಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದ. ಆದರೆ ಅವರು ಎದ್ದಿರಲಿಲ್ಲ. ಬಳಿಕ ಮಲಗಿದ್ದ ತಂದೆಯನ್ನು ಎಬ್ಬಿಸಲು ಹೋಗಿದ್ದ. ವಿಪರೀತ ಮದ್ಯ ಕುಡಿದು ಮಲಗಿದ್ದರಿಂದ ತಂದೆಯೂ ಎದ್ದಿರಲಿಲ್ಲ. ಅವಾಗಲೇ ಮಗ ಅಳುತ್ತ ಮನೆಯಿಂದ ಹೊರಗೆ ಬಂದಿದ್ದ. ಆತನನ್ನು ಗಮನಿಸಿದ್ದ ಸ್ಥಳೀಯರು ಮನೆಯೊಳಗೆ ಹೋಗಿ ನೋಡಿದಾಗ ಮೃತದೇಹ ಕಂಡಿತ್ತು. ಕೊಲೆ ಬಗ್ಗೆ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.