ಬೆಂಗಳೂರು: ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ವಸತಿಗೆ ವ್ಯವಸ್ಥೆ ಮಾಡಿಸುವುದಾಗಿ ಹೇಳಿ ಕ್ರಿಕೆಟ್ ಆಟಗಾರ ಎಂ.ಎಸ್. ಧೋನಿ ಅವರ ವ್ಯವಸ್ಥಾಪಕ ಸ್ವಾಮಿನಾಥನ್ ಶಂಕರ್ ಅವರನ್ನು ವಂಚಿಸಲಾಗಿದ್ದು, ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘₹ 6.33 ಲಕ್ಷ ವಂಚನೆ ಆಗಿರುವುದಾಗಿ ಸ್ವಾಮಿನಾಥನ್ ಅವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘2023ರ ಅಕ್ಟೋಬರ್‌ನಲ್ಲಿ ದೂರುದಾರ ಸ್ವಾಮಿನಾಥನ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಹಣಕಾಸು ಸಚಿವರ ಆಪ್ತ ಸಹಾಯಕನೆಂದು ಹೇಳಿದ್ದ. ತಮ್ಮ ಪರಿಚಯಸ್ಥರು ಬೆಂಗಳೂರಿನಲ್ಲಿ ಭೇಟಿಯಾಗುತ್ತಾರೆಂದು ತಿಳಿಸಿದ್ದ. ಅಕ್ಟೋಬರ್ 29ರಂದು ಸಂದೀಪ್ ಹಾಗೂ ಸಲ್ಮಾನ್ ಅವರು ಬೆಂಗಳೂರಿನಲ್ಲಿ ಸ್ವಾಮಿನಾಥನ್ ಅವರನ್ನು ಭೇಟಿಯಾಗಿದ್ದರು. ‘ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಎಲ್ಲರೂ ಪರಿಚಯ. ವಿಶೇಷ ದರ್ಶನ ಹಾಗೂ ವಸತಿಗೆ ವ್ಯವಸ್ಥೆ ಮಾಡುತ್ತೇವೆ’ ಎಂಬುದಾಗಿ ಆರೋಪಿಗಳು ಹೇಳಿದ್ದರು. ಅಗತ್ಯವಿದ್ದರೆ ಹೇಳುವುದಾಗಿ ಸ್ವಾಮಿನಾಥನ್ ತಿಳಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನ. 30ರಂದು ಕರೆ ಮಾಡಿದ್ದ ಆರೋಪಿಗಳು, ‘12 ಮಂದಿಗೆ ದರ್ಶನಕ್ಕೆ ಪಾಸ್ ಇದೆ. ಬೇಕಾದರೆ ತೆಗೆದುಕೊಳ್ಳಿ’ ಎಂದಿದ್ದರು. ತಾವು ದುಬೈನಲ್ಲಿ ಇರುವುದಾಗಿ ಹೇಳಿದ್ದ ಸ್ವಾಮಿನಾಥನ್, ಬೆಂಗಳೂರಿನಲ್ಲಿರುವ ಸ್ನೇಹಿತನಿಗೆ ಪಾಸ್ ನೀಡುವಂತೆ ತಿಳಿಸಿದ್ದರು. ಸ್ವಾಮಿನಾಥನ್ ಅವರ ಸ್ನೇಹಿತ, ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಸಿಗುವುದೆಂದು ಆರೋಪಿಗಳಿಗೆ ಹಂತ ಹಂತವಾಗಿ ₹6.33 ಲಕ್ಷ ನೀಡಿದ್ದರು. ಇದಾದ ನಂತರ ಆರೋಪಿಗಳು, ಯಾವುದೇ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ತಿರುಪತಿ ದೇವಸ್ಥಾನದಲ್ಲಿ ದರ್ಶನದ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದೆ. ಈ ಜಾಲದಿಂದ ಹಲವರಿಗೆ ವಂಚನೆಯಾಗಿರುವ ದೂರುಗಳು ದಾಖಲಾಗುತ್ತಿವೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.