ಬೆಂಗಳೂರು: ‘ಕ್ರಿಯಾರೂಪದಲ್ಲಿ ಮತ್ತು ನಮಗೆ ಗೊತ್ತಾಗದ ರೀತಿಯಲ್ಲಿ ಎಲ್ಲರ ಮನಸ್ಸಿಗೆ ವಿಷ ಉಣಿಸುವ ಕ್ರಿಯೆ ನಡೆಯುತ್ತಾ ಬಂದಿದೆ. ಅದೇ ಕ್ರಿಯೆಯನ್ನು ಪಠ್ಯದ ಮೂಲಕ ಮಾಡುವುದನ್ನು ತಡೆಯಬೇಕಿದೆ’ ಎಂದು ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಹೇಳಿದರು.
ಬಿ. ಶ್ರೀಪಾದ್ ಭಟ್ ಅವರ ‘ವಿಷವಟ್ಟಿ ಸುಡುವಲ್ಲಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ವಿಷ ಉಣಿಸುವ ಪ್ರಕ್ರಿಯೆ ಆರಂಭವಾದಾಗ ಯಾವುದೋ ಸಣ್ಣ ಗುಂಪು ಮಾಡುತ್ತಿದೆ ಎಂದು ನಿರ್ಲಕ್ಷಿಸಿದ್ದರಿಂದ, ಸರಿಯಾದ ಪ್ರತಿರೋಧ ತೋರದೇ ಇದ್ದಿದ್ದರಿಂದ, ಪ್ರತಿಸ್ಪಂದನೆ ನೀಡದೇ ಇದ್ದಿದ್ದರಿಂದ ಇಂದು ಬೃಹದಾಕಾರವಾಗಿ ಬೆಳೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವಿಷದ ಮೂಲ ಬೀಜ ಎಷ್ಟು ಸಮಯದಿಂದ ಇದೆ. ಮೂಲ ಉದ್ದೇಶವನ್ನು ಆಗು ಮಾಡಲು ಯಾವುದೆಲ್ಲ ತಂತ್ರವನ್ನು, ಅಧಿಕಾರವನ್ನು ಬಳಸಲಾಗಿದೆ ಎಂಬುದನ್ನು ಈ ಕೃತಿ ವಿವರಿಸುತ್ತದೆ. ಪಠ್ಯದಲ್ಲಿ ವಿಷ ಹೇಗೆ ಉಣಿಸಲಾಗುತ್ತಿದೆ ಎಂದು ಲೇಖಕರು ಕಟ್ಟಿಕೊಟ್ಟಿದ್ದಾರೆ. ಜಾತ್ಯತೀತ ಮನಸ್ಸು ಇರುವ ವಿದ್ವಾಂಸರು ಪಠ್ಯ ಪುಸ್ತಕ ಹೇಗಿರಬೇಕು ಎಂದು ಕಾಲಕಾಲಕ್ಕೆ ನೀಡಿದ್ದನ್ನು ಕೃತಿಯಲ್ಲಿ ಜೋಡಿಸಿ ನೀಡಲಾಗಿದೆ’ ಎಂದು ವಿವರಿಸಿದರು.
‘ಪಠ್ಯಪುಸ್ತಕದಲ್ಲಿ ಯಾವುದು ಇರಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಆದರೆ ಅದನ್ನು ಎದುರುಗೊಳ್ಳುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಹಿಂದೆ ಏನಾಯಿತು ಎಂಬ ವಿವರಣೆಗಳು ಇಲ್ಲಿವೆ. ಮುಂದೇನು ಮಾಡಬೇಕು ಎಂಬುದನ್ನು ಕಂಡುಕೊಳ್ಳಬೇಕು’ ಎಂದು ತಿಳಿಸಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಬಾಗಿ ಕೃತಿ ಪರಿಚಯ ಮಾಡಿ, ‘ವಿಷವಟ್ಟಿ ಸುಡುವಲ್ಲಿ ಕೃತಿ ಕನಿಷ್ಠ 5 ವರ್ಷಗಳ ಹಿಂದೆ ಬಂದಿದ್ದರೆ ಈಗ ಆಗಿರುವ ಹಾನಿಯನ್ನು ತಡೆಯಬಹುದಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.