ADVERTISEMENT

2026ಕ್ಕೆ ನವೀಕೃತ ರೈಲು ನಿಲ್ದಾಣ ಲೋಕಾರ್ಪಣೆ: ಸಚಿವ ವಿ. ಸೋಮಣ್ಣ

ಕೆಎಸ್‌ಆರ್ ಬೆಂಗಳೂರು, ಕೆಂಗೇರಿ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್‌ ಉದ್ಘಾಟಿಸಿದ ಕೇಂದ್ರ ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:39 IST
Last Updated 16 ನವೆಂಬರ್ 2024, 15:39 IST
<div class="paragraphs"><p>ಕೆಂಗೇರಿ ರೈಲು ನಿಲ್ದಾಣದಲ್ಲಿ ಶನಿವಾರ ಉದ್ಘಾಟನೆಗೊಂಡ ಎಸ್ಕಲೇಟರ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಂಚರಿಸಿದರು&nbsp; &nbsp; &nbsp; </p></div>

ಕೆಂಗೇರಿ ರೈಲು ನಿಲ್ದಾಣದಲ್ಲಿ ಶನಿವಾರ ಉದ್ಘಾಟನೆಗೊಂಡ ಎಸ್ಕಲೇಟರ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಂಚರಿಸಿದರು     

   

 ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌

ಬೆಂಗಳೂರು: ಯಶವಂತಪುರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣಗಳು ₹ 900 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು, 2026ರ ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿವೆ. ಈ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ADVERTISEMENT

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಕೆಂಗೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಲೇಟರ್‌ಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲವನ್ನು (ಸರ್ಕ್ಯುಲರ್‌ ರೈಲ್ವೆ) ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್ ಬೆಂಗಳೂರು ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುವುದು. ವಿಮಾನ ನಿಲ್ದಾಣದಲ್ಲಿ ಸಿಗುವ ಸೌಲಭ್ಯಗಳು ಇಲ್ಲಿಯೂ ಪ್ರಯಾಣಿಕರಿಗೆ ಕಲ್ಪಿಸುವ ಯೋಜನೆ ಇದೆ. ಅಮೃತ್ ಭಾರತ್ ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ಕೆಂಗೇರಿ ರೈಲು ನಿಲ್ದಾಣವನ್ನು ₹ 29 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ರೈಲ್ವೆಯಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದು ಹೇಳಿದರು.

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 1ರಲ್ಲಿ ₹ 2.8 ಕೋಟಿ ವೆಚ್ಚದಲ್ಲಿ ಮೇಲ್ಮುಖವಾಗಿ ಚಲಿಸಲು ಒಂದು ಮತ್ತು ಕೆಳಮುಖವಾಗಿ ಚಲಿಸಲು ಒಂದು ಎಸ್ಕಲೇಟರ್‌ಗಳನ್ನು ಒದಗಿಸಲಾಗಿದೆ. ಇದು ನಿಲ್ದಾಣದ ಎಲ್ಲ 10 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ. ಕೆಂಗೇರಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 1ರಲ್ಲಿ ₹ 1.06 ಕೋಟಿ ವೆಚ್ಚದಲ್ಲಿ ಒಂದು ಎಸ್ಕಲೇಟರ್ ಅಳವಡಿಸಲಾಗಿದೆ. ಎಲ್ಲ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ಪಾದಚಾರಿ ಮೇಲ್ಸೇತುವೆ ಮೂಲಕ ಸಂಪರ್ಕಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಚ್.ಎಸ್. ಗೋಪಿನಾಥ್ ರೆಡ್ಡಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕರ ಸೇವೆ) ಅನೂಪ್ ದಯಾನಂದ ಸಾಧು, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಶುತೋಷ್ ಮಾಥುರ್, ಪರೀಕ್ಷಿತ್ ಮೋಹನ್‌ ಪುರಿಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.