ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯಕ್ಕೂ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳು ರಾಜಕೀಯದ ಮಹತ್ವಾಕಾಂಕ್ಷೆ ಬೆಳೆಸಿಕೊಳ್ಳುವಂತೆ ಮಾಡಲು 5ನೇ ತರಗತಿಯಿಂದಲೇ ಪಠ್ಯಗಳಲ್ಲೂ ಈ ಕುರಿತ ವಿಚಾರಗಳನ್ನು ಕಲಿಸಬೇಕು’ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್ ಸಲಹೆ ನೀಡಿದರು.
ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅರ್ಹತೆಗಳನ್ನು ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
ಜೆಡಿಎಸ್‌ನ ಕೆ.ಎಸ್.ಲಿಂಗೇಶ್, ‘ವಿಜ್ಞಾನದ ವಿದ್ಯಾರ್ಥಿಗಳಿಗೆ ದೇಶದ ಇತಿಹಾಸ ಹಾಗೂ ರಾಜಕೀಯ ವ್ಯವಸ್ಥೆಯ ಬಗ್ಗೆ ಕಲಿಯುವುದಕ್ಕೆ ಅವಕಾಶವೇ ಸಿಗುತ್ತಿಲ್ಲ. ಅವರಿಗೂ ಇತಿಹಾಸ ಹಾಗೂ ರಾಜಕೀಯ ವಿಜ್ಞಾನ ಕಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿಯ ಅರವಿಂದ ಬೆಲ್ಲದ, ‘ರಾಜಕೀಯಕ್ಕೆ ಒಳ್ಳೆಯ ಜನರು ಬರುತ್ತಿಲ್ಲ. ಬಂದವರೂ ಒಳ್ಳೆಯವರಾಗಿ ಉಳಿಯಲು ಸಾಧ್ಯವಾಗದ ಸ್ಥಿತಿ ಇದೆ. ರಾಜಕೀಯ ಎನ್ನುವುದು ಸಾಮಾಜಿಕ ಕಾರ್ಯವಾಗಿ ಉಳಿದಿಲ್ಲ. ಇದೊಂದು ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ಮುಂದುವರಿಯಲು ಪೂರಕವಾದ ಸೌಕರ್ಯ ಕಲ್ಪಿಸುವ ಅಗತ್ಯ ಇದೆ’ ಎಂದರು.
ರಾಜಕೀಯದಲ್ಲಿ ಅಪರಾಧ ಹಿನ್ನೆಲೆ ಹೊಂದಿದವರ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ, ‘ಉತ್ತರ ಪ್ರದೇಶದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಶೇ 40ರಷ್ಟು ಮಂದಿ ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಕೆಲವರ ವಿರುದ್ಧ ಅತ್ಯಾಚಾರ, ಡಕಾಯಿತಿ, ಮಹಿಳೆಯರನ್ನು ಅಪಮಾನಗೊಳಿಸಿದ ಆರೋಪಗಳೂ ಇವೆ ಎಂದು ಅಸೊಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯ ವರದಿ ಹೇಳಿದೆ’ ಎಂದರು.
ಬಿಜೆಪಿಯ ಎ.ಎಸ್.ಪಾಟೀಲ ನಡಹಳ್ಳಿ, ‘ಆರೋಪ ಹೊತ್ತ ಮಾತ್ರಕ್ಕೆ ಯಾರೂ ಅಪರಾಧಿಗಳಾಗುವುದಿಲ್ಲ. ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರಲ್ಲಿ ಎಷ್ಟು ಮಂದಿ ಜೈಲಿಗೆ ಹೋಗಿ ಬಂದಿಲ್ಲ? ಮೊನ್ನೆಯಷ್ಟೇ ಒಬ್ಬರು ಮಾಜಿ ಮುಖ್ಯಮಂತ್ರಿಗೆ ಜೈಲು ಶಿಕ್ಷೆ ಆಗಿದೆ. ಎರಡೂ ಕಡೆಯವರ ಮುಖವೂ ಕಪ್ಪಗಿದೆ’ ಎಂದರು.
‘ಡಿಜಿಟಲ್ ಕರೆನ್ಸಿ ಬಳಸಿಯೂ ಚುನಾವಣಾ ಅಕ್ರಮಗಳು ನಡೆಯುತ್ತಿದೆ. ಚುನಾವಣಾ ಸಮಯದಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕವೂ ಜನರಿಗೆ ಹಣ ಪಾವತಿ ಮಾಡಲಾಗುತ್ತಿದೆ. ಚುನಾವಣಾ ಆಯೋಗದವರು ಮುಂದಾಲೋಚನೆ ನಡೆಸಿ ಇಂತಹ ಅಕ್ರಮಗಳನ್ನು ತಡೆಯುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು’ ಎಂದು ಎಚ್.ಕೆ.ಪಾಟೀಲ ಸಲಹೆ ನೀಡಿದರು.
‘ಚುನಾವಣಾ ಬಾಂಡ್‌ನಿಂದ ಜನತಂತ್ರಕ್ಕೆ ಧಕ್ಕೆ’
‘ಚುನಾವಣಾ ಬಾಂಡ್ ಕೂಡಾ ತಾರತಮ್ಯದಿಂದ ಕೂಡಿದೆ. ಇದರ ಮೂಲಕ ನಿರ್ದಿಷ್ಟ ಪಕ್ಷಕ್ಕೆ ದೇಣಿಗೆ ನೀಡಿದವರು, ಆ ಪಕ್ಷ ಆಡಳಿತಕ್ಕೆ ಬಂದಾಗ ಪ್ರತಿಫಲ ಪಡೆಯದಿರುತ್ತಾರೆಯೇ. ಇದು ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ. ದೇಶದ ಜನತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಭ್ರಷ್ಟಗೊಳಿಸಲಿದೆ’ ಎಂದು ಎಚ್.ಕೆ.ಪಾಟೀಲ ಕಳವಳ ವ್ಯಕ್ತಪಡಿಸಿದರು.
‘ಬಿಜೆಪಿಯು ₹ 3,435 ಕೋಟಿಯನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದಿದೆ. ಬಾಂಡ್ ಮೂಲಕ ನೀಡಲಾದ ಒಟ್ಟು ದೇಣಿಗೆಯ ಶೇ 75ರಷ್ಟು ಮೊತ್ತವು ಇದೊಂದೇ ಪಕ್ಷಕ್ಕೆ ಹೋಗಿದೆ. ಕಾಂಗ್ರೆಸ್‌ಗೆ ಶೇ 9ರಷ್ಟು, ಪ್ರಾದೇಶಿಕ ಪಕ್ಷಗಳಿಗೆ ಶೇ 2ರಷ್ಟೂ ದೇಣಿಗೆ ಸಿಕ್ಕಿಲ್ಲ ಎಂದು ಎಡಿಆರ್ ವರದಿ ಹೇಳಿದೆ’ ಎಂದರು.
‘ಚುನಾವಣಾ ಬಾಂಡ್ ಮೂಲಕ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು. ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ ಎಂಬುದನ್ನೂ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.
***
ಜನರು ಆದಾಯ ತೆರಿಗೆ ನೀಡುವಾಗ ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡುವುದಕ್ಕೆ ಅವಕಾಶ ಕಲ್ಪಿಸಬೇಕು
- ಅರವಿಂದ ಬೆಲ್ಲದ, ಬಿಜೆಪಿ ಶಾಸಕ
***
ಚುಣಾವಣಾ ಪ್ರಚಾರಕ್ಕೆ 15 ದಿನ ಕಾಲಾವಕಾಶ ನೀಡಬೇಕಾಗಿಲ್ಲ. ನಾಲ್ಕು ದಿನ ಅವಕಾಶ ನೀಡಿದರೆ ಸಾಕು. ಪ್ರಚಾರಕ್ಕೆ ಹೆಚ್ಚು ಸಮಯ ನೀಡಿದರೆ, ಹಣ ಹಂಚುವುದಕ್ಕೆ ಅದು ದುರ್ಬಳಕೆ ಆಗುವ ಸಾಧ್ಯತೆ ಜಾಸ್ತಿ
- ಸಿದ್ದು ಸವದಿ, ಬಿಜೆಪಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.