ಬೆಂಗಳೂರು: ತೆರಿಗೆ ವಂಚನೆ ಆರೋಪದ ಮೇಲೆ ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳು, ಚಿನ್ನಾಭರಣ ವ್ಯಾಪಾರಿಗಳು, ಟೈರ್ ವ್ಯಾಪಾರಿ, ವೈದ್ಯರು ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ಬುಧವಾರ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸಿದ್ದಾರೆ.
ವಿಜಯನಗರ, ಬಿ.ಟಿ.ಎಂ. ಬಡಾವಣೆ, ಹುಳಿಮಾವು, ಸದಾಶಿವನಗರ, ಶಾಂತಿನಗರ, ಜೆ.ಸಿ. ರಸ್ತೆ ಸೇರಿದಂತೆ ನಗರದ ವಿವಿಧೆಡೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಐ.ಟಿ ಅಧಿಕಾರಿಗಳು ಬುಧವಾರ ನಸುಕಿನಿಂದ ತಡ ರಾತ್ರಿಯವರೆಗೂ ಶೋಧ ನಡೆಸಿದರು. ದೆಹಲಿ, ಚೆನ್ನೈ ಸೇರಿದಂತೆ ಹೊರ ರಾಜ್ಯಗಳಿಂದ ಬಂದಿದ್ದ ನೂರಾರು ಮಂದಿ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯೊಂದಕ್ಕೆ ಸೇರಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಸದಾಶಿವನಗರದಲ್ಲಿರುವ ಇಬ್ಬರು ಚಿನ್ನಾಭರಣ ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದ ಐ.ಟಿ ಅಧಿಕಾರಿಗಳು, ಇಡೀ ದಿನ ಶೋಧ ನಡೆಸಿದರು. ಅರಮನೆ ರಸ್ತೆಯಲ್ಲಿರುವ ಒಂದು ಚಿನ್ನಾಭರಣ ಮಳಿಗೆ ಹಾಗೂ ಮತ್ತೊಬ್ಬ ಉದ್ಯಮಿಗೆ ಸೇರಿದ ಚಿನ್ನಾಭರಣ ಮಳಿಗೆಗಳ ಸಮೂಹದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜಯನಗರದಲ್ಲಿ ಕ್ಲಿನಿಕ್ ಹೊಂದಿರುವ ದಂತ ವೈದ್ಯೆಯೊಬ್ಬರ ಮನೆಯಲ್ಲೂ ಶೋಧ ನಡೆಸಲಾಗಿದೆ. ಮಧ್ಯಾಹ್ನದ ವೇಳೆಗೆ ವೈದ್ಯೆಯನ್ನು ಕಾರಿನಲ್ಲಿ ಕರೆದೊಯ್ದ ತನಿಖಾ ತಂಡವು, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು. ಟೈರು ವ್ಯಾಪಾರದ ಜತೆಯಲ್ಲೇ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಉದ್ಯಮಿಯೊಬ್ಬರು ಜೆ.ಸಿ. ರಸ್ತೆಯಲ್ಲಿ ಹೊಂದಿರುವ ಮಳಿಗೆಯಲ್ಲೂ ಶೋಧ ನಡೆದಿದೆ. ಕೋಳಿ ಸಾಕಾಣಿಕೆ ಉದ್ದಿಮೆ ನಡೆಸುತ್ತಿರುವ ವ್ಯಕ್ತಿಯೊಬ್ಬರ ಶಾಂತಿನಗರದ ಮನೆಯಲ್ಲೂ ಶೋಧ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.