ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಈಜಿಪುರ ಮೇಲ್ಸೇತುವೆಯ ಬಾಕಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾರಣರಾಗಿದ್ದು, ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಗೂ ಕಿಮ್ಮತ್ತು ನೀಡುತ್ತಿಲ್ಲ.
ನಾಲ್ಕನೇ ಬಾರಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಬಿಬಿಎಂಪಿ ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಗುತ್ತಿಗೆ ಮೊತ್ತವನ್ನು ಕಡಿತಗೊಳಿಸುವ ಕೆಲಸವನ್ನೇ ಎರಡು ತಿಂಗಳಿಂದ ಮಾಡುತ್ತಿದ್ದಾರೆ. ಇದರಿಂದ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಿದ್ದಾರೆ.
‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಆದರೆ ಈವರೆಗೆ ಟೆಂಡರ್‌ಗೆ ಅನುಮೋದನೆಯೇ ದೊರೆತಿಲ್ಲ. ಹೀಗಾಗಿ, ಸಚಿವರು ಆಕ್ರೋಶಗೊಂಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಗೆ ನಾಲ್ಕನೇ ಬಾರಿಗೆ ಮಾರ್ಚ್ 1ರಂದು ಟೆಂಡರ್ ಆಹ್ವಾನಿಸಲಾಗಿತ್ತು. 17ರಂದು ತಾಂತ್ರಿಕ ಬಿಡ್ ತೆರೆದು, ಏಕೈಕ ಅರ್ಹ ಬಿಡ್‌ದಾರರೊಂದಿಗೆ ಮಾತುಕತೆ ನಡೆಸಲಾಗಿತ್ತು. ಹಿಂದೆ ನೀಡಲಾಗಿದ್ದ ಹೆಚ್ಚು ಮೊತ್ತಕ್ಕೆ ಅಂದರೆ ಶೇ 19.52ರಷ್ಟು ಹೆಚ್ಚಿನ ಮೊತ್ತಕ್ಕೆ ಒಪ್ಪಿಕೊಳ್ಳುವಂತೆ ಗುತ್ತಿಗೆದಾರರಿಗೆ ಜುಲೈ 3ರಂದು ಪತ್ರವನ್ನೂ ಎಂಜಿನಿಯರ್‌ಗಳು ಬರೆದಿದ್ದಾರೆ. ಅದಕ್ಕೆ ಗುತ್ತಿಗೆದಾರರು ಸಮ್ಮತಿಸಿದ್ದರೂ ಸರ್ಕಾರಕ್ಕೆ ಟೆಂಡರ್ ಅನುಮೋದನೆ ಕಳುಹಿಸಲಾಗಿಲ್ಲ.
‘2017ರಲ್ಲಿ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಹೈಕೋರ್ಟ್ ಮೆಟ್ಟಿಲೇರಿತು. ಗುತ್ತಿಗೆಯನ್ನು 2022ರ ಮಾರ್ಚ್ 9ರಂದು ರದ್ದುಪಡಿಸಲಾಗಿತ್ತು. ಹೈಕೋರ್ಟ್ ಮೂರು ತಿಂಗಳಲ್ಲಿ ಮರು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿತ್ತಾದರೂ, ಈವರೆಗೆ ಟೆಂಡರ್ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಇಷ್ಟು ದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರು ದೂರುತ್ತಿದ್ದರು. ಆದರೆ, ಇದೀಗ ಅವರದ್ದೇ ಸರ್ಕಾರವಿದ್ದರೂ ಕಾಮಗಾರಿ ಏಕೆ ಆರಂಭವಾಗಿಲ್ಲ’ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಮುಗಿಸಲು ರಾಮಲಿಂಗಾರೆಡ್ಡಿ ನಮ್ಮೊಂದಿಗೆ ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಅವರು ಸಚಿವರಾಗಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ’ ಎಂದು ಕೋರಮಂಗಲ ಎಸ್‌ಟಿ ಬೆಡ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ದೂರಿದರು.
‘ಈಜಿಪುರ ಮೇಲ್ಸೇತುವೆಯ ಟೆಂಡರ್ ಪ್ರಕ್ರಿಯೆ ಬಹುತೇಕ ಮುಗಿದಿದೆ. ಟರ್ನ್‌ಕೀ ಆಧಾರದ ಈ ಕಾಮಗಾರಿಯ ಬಿಡ್ ಮೊತ್ತ ಕಡಿಮೆ ಮಾಡಿಕೊಳ್ಳಲು ಗುತ್ತಿಗೆದಾರರೂ ಒಪ್ಪಿದ್ದಾರೆ. ಮುಖ್ಯ ಆಯುಕ್ತರು ಸಹಿ ಹಾಕಿದ ಕೂಡಲೇ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳೂ ತಿಳಿಸಿದರು.
ಸದ್ಯವೇ ಅನುಮೋದನೆ
‘ಈಜಿಪುರ ಮೇಲ್ಸೇತುವೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ನಾಲ್ಕನೇ ಬಾರಿಗೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರೊಂದಿಗೆ ಚೌಕಸಿ ಕೂಡ ಮುಗಿದಿದೆ. ಬಿಬಿಎಂಪಿ ಹಿರಿಯ ಅಧಿಕಾರಿಗಳು ಟೆಂಡರ್ ಅನ್ನು ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲು ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಟೆಂಡರ್ ಅನುಮೋದನೆ ಕಡತವನ್ನು ಶೀಘ್ರವೇ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಸಚಿವ ಸಂಪುಟದ ಮುಂದೆ ಈ ವಿಚಾರ ಬರಲಿದ್ದು ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.