ಬೆಂಗಳೂರು: ‘ರಾಜ್ಯದಲ್ಲಿ ವಾಹನಗಳ ವೇಗದ ಮಿತಿ 80 ಕಿ.ಮೀ (ಗಂಟೆಗೆ) ಇದ್ದು, ಅದನ್ನು 100 ಕಿ.ಮೀಗೆ ಹೆಚ್ಚಿಸಬೇಕು’ ಎಂದು ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘ ಒತ್ತಾಯಿಸಿದೆ.
ಆ ಸಂಬಂಧ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ, ಸಾರಿಗೆ ಇಲಾಖೆಯ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
‘ದೇಶದ ಹಲವು ರಾಜ್ಯಗಳಲ್ಲಿ ವೇಗಮಿತಿಯನ್ನು ಈಗಾಗಲೇ ಹೆಚ್ಚಳ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 4,000 ಕಿ.ಮೀ ಉದ್ದದ ಗುಣಮಟ್ಟದ ಹೆದ್ದಾರಿ ಇದ್ದರೂ ವೇಗದ ಮಿತಿ ಹೆಚ್ಚಿಸಿಲ್ಲ’ ಎಂದು ಮನವಿಯಲ್ಲಿ ದೂರಿದ್ದಾರೆ.
‘ಸಾರಿಗೆ ಇಲಾಖೆ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವುದಕ್ಕಾಗಿ ‘ಇ-ವಾಹನ್’ ವ್ಯವಸ್ಥೆ ರೂಪಿಸಲಾಗಿದೆ. ಅದು ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಅದರ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. 75,000 ಕೆ.ಜಿ.ಗೂ ಮೇಲ್ಪಟ್ಟ ವಾಹನಗಳ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯವಲ್ಲವೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ. ಅದನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ; ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್‌ಗೆ ಮನವಿ ಸಲ್ಲಿಸಿರುವ ಸಂಘ, ‘ನಗರದ ಬಹುಮಹಡಿ ಕಟ್ಟಡ, ಶಾಪಿಂಗ್ ಕಾಂಪ್ಲೆಕ್ಸ್, ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.