ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಗೆ ಹೊಸದಾಗಿ ಅಳವಡಿಸಿರುವ 240 ಕೇಬಲ್‌ಗಳಿಂದಾಗಿ ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಾಗಿರುವುದು ಅಧ್ಯಯನದಿಂದ ದೃಢಪಟ್ಟಿದೆ. ಅಧ್ಯಯನ ವರದಿಗೆ ಸಮ್ಮತಿ ಸಿಕ್ಕಿದರೆ, ಎರಡು ವರ್ಷಗಳಿಂದ ವಾಹನ ಸವಾರರು ಅನುಭವಿಸಿದ್ದ ಸಂಕಷ್ಟಗಳಿಗೆ ಮುಕ್ತಿ ಸಿಗಲಿದೆ.
‘ಸಾಮರ್ಥ್ಯ ಪರೀಕ್ಷೆ’ಯ 20 ಪುಟಗಳ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಾಂತ್ರಿಕ ತಜ್ಞರನ್ನು ಒಳಗೊಂಡ ಅಧ್ಯಯನ ಸಮಿತಿಯು ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಮೇಲ್ಸೇತುವೆ ಸುರಕ್ಷತೆಯ ಕುರಿತು ಸಕಾರಾತ್ಮಕ ಅಂಶಗಳನ್ನೇ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ನಗರದ ಪೀಣ್ಯ–ಕೆನ್ನಮೆಟಲ್ (ವಿಡಿಯಾ) ನಡುವೆ ಈ ಮೇಲ್ಸೇತುವೆ ಹಾದುಹೋಗಿದ್ದು, ನಗರದ ಅತ್ಯಂತ ಉದ್ದನೆಯ ಸೇತುವೆಗಳಲ್ಲಿ ಇದು ಸಹ ಒಂದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಆದರೆ, ಸೇತುವೆಯ 8ನೇ ಮೈಲಿನ ಜಂಕ್ಷನ್ ಸಮೀಪದ 102 ಹಾಗೂ 103ನೇ ಪಿಲ್ಲರ್‌ನಲ್ಲಿ ಕೇಬಲ್‌ಗಳು ಬಾಗಿದ್ದವು. 2021ರ ಡಿಸೆಂಬರ್‌ನಿಂದಲೇ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನಂತರ, ತಜ್ಞರ ಅನುಮತಿ ಪಡೆದು, ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈಗ ದುರಸ್ತಿ ಕಾರ್ಯವೂ ಪೂರ್ಣಗೊಂಡು ಪರೀಕ್ಷೆ ಸಹ ಯಶಸ್ವಿ ಆಗಿದೆ.
ಜ.16ರಿಂದ 19ರ ವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ಬಂದ ವಿವರಗಳನ್ನು ನಮೂದಿಸಿಕೊಳ್ಳಲಾಗಿತ್ತು. ಅದನ್ನು ತಾಂತ್ರಿಕವಾಗಿ ಅಧ್ಯಯನಕ್ಕೆ ಒಳಪಡಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಅಧ್ಯಯನ ಸಮಿತಿ ಸದಸ್ಯ ಚಂದ್ರಕಿಶನ್ ತಿಳಿಸಿದ್ದಾರೆ.
‘ಉಷ್ಣಾಂಶ ಹಾಗೂ ತಣ್ಣನೆ (ಹಗಲು–ರಾತ್ರಿ ವೇಳೆ) ವಾತಾವರಣ ಕಾರಣವೇ, ಭಾರ ಹೊತ್ತ ವಾಹನಗಳು ಸೇತುವೆಯಲ್ಲಿ ಸಂಚರಿಸಿದಾಗ ಸ್ಪ್ರಿಂಗ್‌ಗಳು, ಕೇಬಲ್‌ಗಳು ಕೆಳಕ್ಕೆ ಬಾಗಿವೆಯೇ? ಅಥವಾ ಸೇತುವೆ ಮೂಲ ರಚನೆಯಲ್ಲಿ ವ್ಯತ್ಯಾಸವಾಗಿದೆಯೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಮೇಲ್ಸೇತುವೆ ಕಂಪನವು ನಿಗದಿಯಷ್ಟೇ ಇದೆ. ಇದರಿಂದ ಆತಂಕ ದೂರವಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೇತುವೆ ಮೇಲೆ ಭಾರ ಹೇರದೆ 24 ಗಂಟೆಗಳ ಪರಿಶೀಲನೆ ನಡೆಸಲಾಗಿತ್ತು. ಆಗ ಸೇತುವೆ ಮೂಲ ಸ್ವರೂಪಕ್ಕೆ ಬಂದಿರುವುದು ಕಾಣಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆರಂಭದಲ್ಲಿ 2 ಟ್ರಕ್‌ಗಳನ್ನು ಮಾತ್ರ ಮೇಲಕ್ಕೆ ಕೊಂಡೊಯ್ದು ಪಿಲ್ಲರ್ ಮೇಲೆ ನಿಲ್ಲಿಸಲಾಗಿತ್ತು. ಆಗ ಸ್ಪ್ರಿಂಗ್‌ಗಳು ಎಷ್ಟು ಕೆಳಕ್ಕೆ ಹೋಗಿವೆ ಎಂಬುದನ್ನು ನಮೂದಿಸಿಕೊಳ್ಳಲಾಗಿತ್ತು. ನಂತರ ಭಾರ ಹೊತ್ತ ಎರಡೆರಡೇ ಟ್ರಕ್‌ಗಳನ್ನು ಸೇತುವೆ ಮೇಲಕ್ಕೆ ತಂದು ಪರೀಕ್ಷೆ ನಡೆಸಲಾಗಿತ್ತು. ಹೀಗೆ 16 ಟ್ರಕ್‌ಗಳನ್ನು ಒಮ್ಮೆಲೇ ನಿಲ್ಲಿಸಿ, ಪರಿಶೀಲನೆ ನಡೆಸಲಾಗಿತ್ತು.
‘ವರದಿ ಆಧರಿಸಿ ಫೆ.2ರಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಹಾಗೂ ತಜ್ಞರ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ. ನಂತರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ಕೋರಲಾಗುವುದು. ಅನುಮತಿ ದೊರೆತ ಮರುದಿನವೇ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನ ಸಂಚಾರವನ್ನು ಆರಂಭಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
‘ಯಾವುದೇ ದೊಡ್ಡ ಕಟ್ಟಡ ಅಥವಾ ಸೇತುವೆಯ ರಚನೆಗಳಲ್ಲಿ ಹೆಚ್ಚಿನ ಕಂಪನ ಕಂಡುಬಂದರೆ ಅಪಾಯವಿದೆ ಎಂದೇ ಭಾವಿಸಬೇಕು. ಹೊಸ ಕೇಬಲ್ ಅಳವಡಿಕೆಯ ನಂತರ ಪೀಣ್ಯ ಮೇಲ್ಸೇತುವೆ ಕ್ಷಮತೆಯಿಂದ ಕೂಡಿರುವುದು ಗೋಚರಿಸಿದೆ. ಹೀಗಾಗಿ ಸೇತುವೆಯನ್ನು ಮತ್ತಷ್ಟು ಭದ್ರ ಪಡಿಸಲು ತುಕ್ಕು ಹಿಡಿದಿರುವ 1200 ಕೇಬಲ್‌ಗಳನ್ನು ಬದಲಾವಣೆ ಮಾಡಲಾಗುವುದು. ಅನುಮತಿ ದೊರೆತ ಮೇಲೆ ಸಂಚಾರವನ್ನು ನಿರ್ಬಂಧಿಸದೆ ಕೇಬಲ್ ಬದಲಾವಣೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಅಧ್ಯಯನ ಸಮಿತಿ ಸದಸ್ಯ ಚಂದ್ರಕಿಶನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.