ADVERTISEMENT

ಹೆಚ್ಚುತ್ತಿರುವ ಅನಧಿಕೃತ ಪಿ.ಜಿ.ಗಳು

ನಗರದ ಪೇಯಿಂಗ್ ಗೆಸ್ಟ್‌ಗಳಲ್ಲಿ ಸುರಕ್ಷತೆಯೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 23:44 IST
Last Updated 24 ಜುಲೈ 2024, 23:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್‌ ಗೆಸ್ಟ್‌ (ಪಿ.ಜಿ.) ವಸತಿನಿಲಯಗಳಲ್ಲಿರುವ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೋರಮಂಗಲದ ಪಿ.ಜಿ.ಯಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಹತ್ಯೆ ಮಾಡಿರುವುದು ಈ ಚರ್ಚೆಗೆ ಕಾರಣವಾಗಿದೆ.

ಪಿ.ಜಿ.ಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಗರ ಪೊಲೀಸರು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಪರವಾನಗಿ ಮತ್ತು ಸಮರ್ಪಕ ಕ್ರಮಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪಿ.ಜಿಗಳು ಸಮಸ್ಯೆಯಾಗಿವೆ. ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು ಎಂಬ ನಿಯಮವಿದ್ದರೂ ಅನೇಕ ಪಿ.ಜಿ.ಗಳು ಪರವಾನಗಿ ಪಡೆಯುತ್ತಿಲ್ಲ. ವಿದ್ಯುತ್, ನೀರು ಮತ್ತು ತೆರಿಗೆಯ ವಾಣಿಜ್ಯ ದರಗಳನ್ನು ತಪ್ಪಿಸಲು ಅನಧಿಕೃತವಾಗಿ ಪಿ.ಜಿ.ಗಳನ್ನು ನಡೆಸಲಾಗುತ್ತಿದೆ.

ADVERTISEMENT

ನಗರದಲ್ಲಿರುವ ಪಿ.ಜಿ.ಗಳಲ್ಲಿ ಶೇ 60ರಷ್ಟು ಅನಧಿಕೃತವಾಗಿವೆ. ಇದರಿಂದ ಅಧಿಕೃತವಾಗಿ ಪಿ.ಜಿ. ನಡೆಸುವವರಿಗೂ ಧಕ್ಕೆ ಉಂಟಾಗಿದೆ ಎಂದು ಬೆಂಗಳೂರು ಪಿ.ಜಿ ಮಾಲೀಕರ ಸಂಘದ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಪಿ.ಜಿ.ಗಳಿಗೆ ಬೇಡಿಕೆ ಜಾಸ್ತಿಯಿದೆ. ಹಾಗಾಗಿ ಮೂರು ಅಥವಾ ನಾಲ್ಕು ಕೊಠಡಿಗಳುಳ್ಳ (ಬಿಎಚ್‌ಕೆ) ಮನೆಗಳನ್ನೇ ಪಿ.ಜಿ.ಯಾಗಿ ಪರಿವರ್ತಿಸಿದ್ದಾರೆ. ವಿದ್ಯುತ್‌, ನೀರಿಗೆ ಹೆಚ್ಚಿನ ದರ ಪಾವತಿಸುವುದನ್ನು ತಪ್ಪಿಸಲು ಪರವಾನಗಿಯನ್ನೇ ಪಡೆಯುವುದಿಲ್ಲ. ಒಬ್ಬರೇ ಐದಾರು ಪಿ.ಜಿ.ಗಳನ್ನು ನಿರ್ವಹಿಸುತ್ತಿರುವ ನಿದರ್ಶನಗಳೂ ಇವೆ. ಪಿ.ಜಿ.ಯಲ್ಲಿ ವಾಸವಾಗಿರುವವರಲ್ಲದೇ ಹೊರಗಿನಿಂದ ಯಾರು ಬರುತ್ತಾರೆ ಎಂದು ನಿಗಾ ಇಡಲು ಮಾಲೀಕರೇ ಪಿ.ಜಿ. ಆವರಣದಲ್ಲಿ ಇರುವುದಿಲ್ಲ. ಇಂತಹ ಕಾನೂನು ಬಾಹಿರ ಪಿ.ಜಿ.ಗಳಿಂದ ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಎಂದು ಸಂಘದ ಕಾರ್ಯದರ್ಶಿ ಸುಖಿ ಸಿಯೋ ತಿಳಿಸಿದರು.

ಭದ್ರತಾ ಸಮಸ್ಯೆಗಳ ಹೊರತಾಗಿ, ಅನಧಿಕೃತ ಪಿ.ಜಿ.ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ವೈಟ್‌ಫೀಲ್ಡ್‌ ನಿವಾಸಿ ಸಂದೀಪ್ ಅನಿರುಧನ್ ದೂರಿದರು.

ಅಕ್ರಮ ಪಿ.ಜಿ.ಗಳು ಜನಸಂಖ್ಯಾ ಸಾಂದ್ರತೆಯನ್ನು ತೀವ್ರವಾಗಿ ಹೆಚ್ಚಿಸುತ್ತಿವೆ. ಇದು ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ವಾಹನದಟ್ಟಣೆ ಹೆಚ್ಚುತ್ತಿದೆ. ನೀರಿನ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಒಳಚರಂಡಿ ಸಮಸ್ಯೆಯೂ ಹೆಚ್ಚುತ್ತದೆ ಎಂದು ಅವರು ವಿವರಿಸಿದರು.

‘ಪಿ.ಜಿಗಳ ಮೇಲೆ ನಿಗಾ ಇರಿಸಿದ್ದೇವೆ. ಸಿಬ್ಬಂದಿ ಕೊರತೆಯಿಂದ ಪ್ರತಿ ಪಿ.ಜಿಯನ್ನು ನಿರಂತರವಾಗಿ ಪರಿಶೀಲಿಸುವುದು ಅಸಾಧ್ಯ. ದೂರುಗಳು ಬಂದಾಗ ಆರೋಗ್ಯ ನಿರೀಕ್ಷಕರು ಪರಿಶೀಲಿಸುತ್ತಾರೆ. ಅನಧಿಕೃತ ಪಿ.ಜಿ.ಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ’ ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.