ADVERTISEMENT

ಬೆಂಗಳೂರು | ಜ.17ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:24 IST
Last Updated 11 ಜನವರಿ 2024, 16:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಅಪಘಾತ ನಡೆಸಿ ಪರಾರಿ’ಯಾದ (ಹಿಟ್ ಆ್ಯಂಡ್‌ ರನ್) ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ ₹7 ಲಕ್ಷ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರವು ಲಾರಿ ಮಾಲೀಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ‘ಹಿಟ್‌ ಆ್ಯಂಡ್‌ ರನ್‌’ ಪ್ರಕರಣವನ್ನು ತಮಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ದವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ ಎಂದು ಬೆಂಗಳೂರು ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ. ಚನ್ನಾ ರೆಡ್ಡಿ ಮತ್ತು ಅಧ್ಯಕ್ಷ ನವೀನ್ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

ಅಪಘಾತವಾದಾಗ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿನ ಚಕ್ರಕ್ಕೆ ಬೈಕ್‌ ಡಿಕ್ಕಿ ಹೊಡೆದರೂ ಜನರು ಬಂದು ಲಾರಿ ಚಾಲಕನ ಮೇಲೆಯೇ ಹಲ್ಲೆ ಮಾಡುತ್ತಾರೆ. ಹಾಗಾಗಿ ಸ್ಥಳದಲ್ಲಿ ವಾಹನ ನಿಲ್ಲಿಸದೇ ಆತ್ಮರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗುತ್ತಾರೆ. ಅದನ್ನು ಹಿಟ್‌ ಆ್ಯಂಡ್‌ ರನ್‌ ಪ್ರಕರಣ ಎಂದು ದಾಖಲಿಸುವುದು ಸರಿಯಾದ ನಿಯಮವಲ್ಲ ಎಂದು ತಿಳಿಸಿದರು.‌

ಈ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಹೀಗಾಗಿ ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

‘ನಮ್ಮ ಅಸೋಸಿಯೇಷನ್‌ನಲ್ಲಿ ಸುಮಾರು 6 ಲಕ್ಷ ಮಾಲೀಕರಿದ್ದಾರೆ. ರಾಜ್ಯದಲ್ಲಿ ಸುಮಾರು 15 ಲಕ್ಷ ಲಾರಿ ಚಾಲಕರಿದ್ದಾರೆ. ಚಾಲಕರಿಗೆ ಮತ್ತು ಮಾಲೀಕರಿಗೆ ತೊಂದರೆ ನೀಡುವ ಇಂಥ ಕಾನೂನು ರದ್ದು ಮಾಡಬೇಕು. ಈಗಿರುವ ಕಾನೂನು ಸರಿ ಇರುವುದರಿಂದ ಹೊಸ ಕಾನೂನಿನ ಅಗತ್ಯವಿಲ್ಲ. ಈಗಿರುವ ಕಾನೂನಿನಲ್ಲಿ ಪ್ರಕರಣವನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಲು ಅವಕಾಶವಿದೆ. ತಿದ್ದುಪಡಿ ಮಾಡಿರುವ ಹೊಸ ಕಾನೂನಿನಲ್ಲಿ ಯಾವುದೇ ಅಪಘಾತವಾದರೂ ದೊಡ್ಡ ವಾಹನದ ಚಾಲಕರನ್ನು ತಕ್ಷಣ ಬಂಧಿಸಬೇಕು ಎಂಬ ಅಂಶವನ್ನು ಸೇರಿಸಲಾಗಿದೆ. ಇದು ಸರಿಯಾದ ನ್ಯಾಯವಲ್ಲ’ ಎಂದು ಹೇಳಿದರು.

ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುವವರೆಗೆ ಮುಷ್ಕರ ನಡೆಸಲಾಗುವುದು. ಈ ಅವಧಿಯಲ್ಲಿ ಆಂಬುಲೆನ್ಸ್, ಔಷಧ ಸೇರಿದಂತೆ ಅಗತ್ಯ ವಸ್ತುಗಳ ವಾಹನಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೆಲ್ಲಾ ರಾಜಮಣಿ, ತಮಿಳುನಾಡು ಸಂಘದ ಡಿ. ಅಕ್ಬರ್, ಕೇರಳ ಸಂಘದ ಶಾಜು, ಆಂಧ್ರಪ್ರದೇಶದ ಬಾಷಾ ಬಾನ್ ಮತ್ತು ಮಹಾರಾಷ್ಟ್ರ ಸಂಘದ ಅಧ್ಯಕ್ಷ ಶಂಕರ ದಾದಾ, ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಮಹಮ್ಮದ್‌ ಮಸ್ತಾನ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.