ಬೆಂಗಳೂರು: ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣೆ ಘಟಕದಿಂದ ಬನಶಂಕರಿ 6ನೇ ಹಂತದ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಮುಚ್ಚಬೇಕು ಎಂದು ಆಗ್ರಹಿಸಿ ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.
‘ಘಟಕ ಮುಚ್ಚಿ ಎಂಬ ಬೇಡಿಕೆ ಸಲ್ಲಿಸಿ 8 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಚಿವ ಎಸ್.ಟಿ. ಸೋಮಶೇಖರ್ ಅವರೂ ಈ ಬಗ್ಗೆ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರು ಫೆ.9ರಂದು ಘಟಕ ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಇಷ್ಟಾದರೂ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಹೋರಾಟ ಆರಂಭಿಸಿದ್ದೇವೆ’ ಎಂದು ನಿವಾಸಿಗಳು ತಿಳಿಸಿದರು.
‘ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಲಿನ ನಾಲ್ಕೈದು ಕಿ.ಮೀ ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ವಾಸಿಸಲು ಸಾಧ್ಯವಾಗುತ್ತಿಲ್ಲ. ಭೂಮಿ ಹಾಗೂ ಜಲತೊರೆಗಳಿಗೆ ಕಲ್ಮಶವೂ ಸೇರುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.