ADVERTISEMENT

ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು: ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 23:40 IST
Last Updated 8 ಆಗಸ್ಟ್ 2024, 23:40 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆ ಉಗ್ರರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಕಟ್ಟೆಚ್ಚರ ವಹಿಸುವಂತೆ ಎಲ್ಲ ವಿಭಾಗದ ಪೊಲೀಸರಿಗೆ ಸೂಚಿಸಲಾಗಿದೆ.

ಆಗಸ್ಟ್​ 15ರಂದು ನಗರ ಮಾಣಿಕ್ ಶಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಉಗ್ರರು ಕವಾಯತು ಹಾಗೂ ಕಾರ್ಯಕ್ರಮಗಳನ್ನೇ ಗುರಿಯಾಗಿಸಿರುವ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಸಂಬಂಧ ಹೋಟೆಲ್‌ ಮಾಲೀಕರ ಸಂಘಕ್ಕೆ ಪತ್ರ ಬರೆದಿರುವ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು, ‘ಹೋಟೆಲ್‌ ಮಾಲೀಕರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಹೋಟೆಲ್‌ಗಳಲ್ಲಿ ತಂಗುವ ಸಂಶಯಾಸ್ಪದ ವ್ಯಕ್ತಿಗಳು, ವಿದೇಶಿಯರು ಹಾಗೂ ಅಪರಿಚಿತರ ಬಗ್ಗೆ ನಿಗಾ ವಹಿಸಬೇಕು. ಅಲ್ಲದೇ ವಸತಿ ಗೃಹಗಳಲ್ಲಿ ವಾಸ್ತವ್ಯ ಮಾಡುವವರ ದಾಖಲೆಗಳನ್ನು ಪಡೆದುಕೊಳ್ಳಬೇಕು. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಉಲ್ಲೇಖಿಸಿದ್ಧಾರೆ.

ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ:
ಸ್ವಾತಂತ್ರ್ಯ ದಿನಾಚರಣೆ ಆಸುಪಾಸಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ಡಿಸಿಪಿಗಳು ಕ್ರಮ ಕೈಗೊಳ್ಳಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಬೇಕು. ಅಲ್ಲದೇ ಗಸ್ತು ಹೆಚ್ಚಿಸಬೇಕು. ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡುಬಂದರೆ ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.