ಬೆಂಗಳೂರು: ‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಆಗಸ್ಟ್ 8ರಿಂದ 19ರವರೆಗೆ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರಿಗೆ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಂಬೇಡ್ಕರ್ ಅವರ ಜೀವನ, ಸಾಧನೆ, ಹೋರಾಟಗಳನ್ನು ಪ್ರದರ್ಶಿಸಲಾಗುವುದು. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಭೇಟಿನೀಡುವ ನಿರೀಕ್ಷೆ ಇದೆ’ ಎಂದರು.
‘ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 216ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜು ಮಾಡಲಾಗುತ್ತಿದೆ. ಗುರುವಾರ (ಆಗಸ್ಟ್ 8) ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನವನ್ನು ಉದ್ಘಾಟಿಸುವರು’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಮಾಹಿತಿ ನೀಡಿದರು.
‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ನವದೆಹಲಿಯಲ್ಲಿರುವ ಸಂಸತ್ ಭವನದ ಪ್ರತಿಕೃತಿಯು 3.6 ಲಕ್ಷ ಗುಲಾಬಿ ಹಾಗೂ 2.4 ಲಕ್ಷ ಸೇವಂತಿಗೆ ಹೂಗಳಲ್ಲಿ ಅನಾವರಣಗೊಳ್ಳಲಿದೆ. ಸಂಸತ್ ಭವನದ ಮುಂಭಾಗದಲ್ಲಿ 12 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ರಾರಾಜಿಸಲಿದೆ. ಗಾಜಿನ ಮನೆಯ ಬಲಭಾಗದಲ್ಲಿ ಮಧ್ಯಪ್ರದೇಶದ ಮಾಹೋನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮಸ್ಥಳದ ಸ್ಮಾರಕದ ಮಾದರಿಯನ್ನು 3.4 ಲಕ್ಷ ಹೂಗಳನ್ನು ಬಳಸಿ ನಿರ್ಮಿಸಲಾಗುವುದು’ ಎಂದರು.
‘ಅಂಬೇಡ್ಕರ್ ಅವರ ಚೈತ್ಯಭೂಮಿ ಸ್ಮಾರಕ ಸ್ತೂಪವನ್ನು 3.4 ಲಕ್ಷ ಹೂಗಳಿಂದ ನಿರ್ಮಿಸಲಾಗುತ್ತಿದೆ. ಗಾಜಿನ ಮನೆ ಕೇಂದ್ರ ಭಾಗದ ಹಿಂಭಾಗದಲ್ಲಿ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಿಂಬಿಸುವ ಮಹಾಡ್ ಸತ್ಯಾಗ್ರಹ, ಕಲಾ ರಾಮ್ ದೇವಸ್ಥಾನದ ಪ್ರವೇಶ, ಕೋರೆಗಾಂವ್ ವಿಜಯೋತ್ಸವದ ಸ್ತಂಭದ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.
ಆಗಸ್ಟ್ 10ರಂದು ನಡೆಯುವ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಯ ಪ್ರದರ್ಶನವನ್ನು ಚಲನಚಿತ್ರ ನಟಿ ಸುಧಾರಾಣಿ ಉದ್ಘಾಟಿಸಲಿದ್ದಾರೆ.
ಇಕೆಬಾನ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಗಸ್ಟ್ 17ರಂದು ಚಿತ್ರನಟ ‘ಮುಖ್ಯಮಂತ್ರಿ’ ಚಂದ್ರು ಬಹುಮಾನಗಳನ್ನು ವಿತರಿಸಲಿದ್ದಾರೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪ ನಿರ್ದೇಶಕಿ ಜಿ. ಕುಸುಮಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.