ಬೆಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರ ಹಾಗೂ ಅಕಾಡೆಮಿಗಳು ಆಗಸ್ಟ್ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50 ರಷ್ಟು ರಿಯಾಯಿತಿ ಘೋಷಿಸಿವೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 704 ಶೀರ್ಷಿಕೆಗಳನ್ನು ಹೊರತಂದಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಪ್ರಾಧಿಕಾರದ್ದಾಗಿದ್ದು, ಎಲ್ಲಾ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ ಇರಲಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆ, ಎಲ್ಲಾ ಜಿಲ್ಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಇರಲಿದೆ. ಪ್ರಾಧಿಕಾರದ ಜಾಲತಾಣ www.kannadapustakapradhikara.com ಮೂಲಕವೂ ಖರೀದಿಸಬಹುದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವೂ ತನ್ನ ಎಲ್ಲಾ ಪ್ರಕಟಣೆಗಳಿಗೆ ಶೇ 50 ರಷ್ಟು ರಿಯಾಯಿತಿ ಘೋಷಿಸಿದೆ. ಪುಸ್ತಕಗಳನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi.karnataka.gov.in ಮೂಲಕ ಪಡೆಯಬಹುದು ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳಿಗೂ ಶೇ 50 ರಷ್ಟು ರಿಯಾಯಿತಿ ನೀಡಲಾಗಿದೆ. ಅಕಾಡೆಮಿ ಕಚೇರಿಗೆ ಬರಲು ಸಾಧ್ಯ ಆಗದವರು ತಮೆಗೆ ಬೇಕಾದ ಪುಸ್ತಕಗಳನ್ನು ಇ ಮೇಲ್ ಮೂಲಕ ತಿಳಿಸಿದಲ್ಲಿ ಕೋರಿಯರ್ ಮಾಡಲಾಗುತ್ತದೆ. ಆ ವೆಚ್ಚವನ್ನೂ ಮುಂಚಿತವಾಗಿ ತಿಳಿಸಲಾಗುತ್ತದೆ. ಪುಸ್ತಗಳನ್ನು sahithyaacademy.karnataka.gov.in ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ವಿವರಕ್ಕೆ ಇ ಮೇಲ್ ವಿಳಾಸ sahithya.academy@gmail.com ಅಥವಾ 080 22211730ಕ್ಕೆ ಸಂಪರ್ಕಿಸಬಹುದು ಎಂದು ಅಕಾಡೆಮಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.