ADVERTISEMENT

ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿ ಕಠಿಣ: RBI ಮಾಜಿ ಗವರ್ನರ್‌ ರಂಗರಾಜನ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:08 IST
Last Updated 19 ಜೂನ್ 2024, 14:08 IST
<div class="paragraphs"><p>ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ರವರು ಧನುಶಾ ಪ್ರಭು ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. </p></div>

ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ರವರು ಧನುಶಾ ಪ್ರಭು ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು.

   

ಬೆಂಗಳೂರು: ಸ್ವಾತಂತ್ರ್ಯ ದೊರೆತು ನೂರು ವರ್ಷ ತುಂಬವ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಗುರಿ ಇಟ್ಟುಕೊಂಡಿದೆ. ಆದರೆ, ಈಗಿನ ತಲಾ ಆದಾಯ ನೋಡಿದರೆ ಇದು ಕಠಿಣದ ಹಾದಿಯಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ಸಿ. ರಂಗರಾಜನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ADVERTISEMENT

ಪ್ರಸ್ತುತ 13,845 ಡಾಲರ್‌ಗಿಂತ(₹11.55 ಲಕ್ಷ) ಅಧಿಕ ತಲಾ ಆದಾಯ ಹೊಂದಿರುವ ದೇಶಗಳನ್ನು ಅಭಿವೃದ್ಧಿ ಹೊಂದಿದ ದೇಶಗಳೆಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ವರ್ಗೀಕರಿಸಿದೆ. 2047ರ ಹೊತ್ತಿಗೆ ತಲಾ ಆದಾಯದ ಮಟ್ಟ ಇನ್ನೂ ಹೆಚ್ಚಾಗುತ್ತದೆ. ಭಾರತವು ಸದ್ಯ 2,500 ಡಾಲರ್‌(₹2.08 ಲಕ್ಷ)  ತಲಾ ಆದಾಯವನ್ನು ಹೊಂದಿದೆ. ಇದು ನಾವು ಕ್ರಮಿಸಬೇಕಾದ ದೂರವನ್ನು ತೋರಿಸುತ್ತದೆ ಎಂದು ವಿವರಿಸಿದರು.

‘ಜ್ಞಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಕೃಷಿ, ಕೈಗಾರಿಕೆ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ದೇಶದ ಬೆಳವಣಿಗೆಯನ್ನು ಸೂಚಿಸುತ್ತದೆ. ಗುಣಮಟ್ಟದ ಮತ್ತು ಪರಿಣಾಮಕಾರಿ ಶೈಕ್ಷಣಿಕ ಜ್ಞಾನ ಪಡೆಯುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಹುದು’ ಎಂದು ಹೇಳಿದರು.

ಯುವಜನರು ಆದರ್ಶ ಮತ್ತು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಮಹತ್ವಾಕಾಂಕ್ಷೆ ಇಲ್ಲದ ಆದರ್ಶವಾದದಿಂದ ಏನನ್ನೂ ಸಾಧಿಸಲಾಗದು. ಆದರ್ಶವಿಲ್ಲದ ಮಹತ್ವಾಕಾಂಕ್ಷೆ ಅಪಾಯಕಾರಿಯಾಗಿರುತ್ತದೆ ಎಂದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಮಾತನಾಡಿ, ‘ಉನ್ನತ ಶಿಕ್ಷಣ ಪಡೆದು ಬಾಬಾ ಸಾಹೇಬರು ಬಯಸಿದ್ದರೆ ಲಂಡನ್, ಅಮೆರಿಕ ಅಥವಾ ದೇಶದಲ್ಲೇ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಭವ್ಯ ಜೀವನ ನಡೆಸಬಹುದಿತ್ತು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಗಳನ್ನು ತೊಡೆದುಹಾಕಲು ಸಮಾನತೆ ಮತ್ತು ಸಾಮರಸ್ಯದ ವಾತಾವರಣವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ದೇಶದಲ್ಲಿ ಕೆಲಸ ಮಾಡಿದರು. ನುರಿತ ಅರ್ಥಶಾಸ್ತ್ರಜ್ಞರಾಗಿದ್ದರು. ಭಾರತೀಯ ಕರೆನ್ಸಿ ಸಮಸ್ಯೆ, ಹಣದುಬ್ಬರ ಮತ್ತು ವಿನಿಮಯ ದರ, ಭಾರತದ ರಾಷ್ಟ್ರೀಯ ಲಾಭಾಂಶ, ಭೂರಹಿತ ಕಾರ್ಮಿಕರ ಸಮಸ್ಯೆ ಮತ್ತು ಪ್ರಮುಖ ವಿಷಯಗಳ ಕುರಿತು ಸಂಶೋಧನೆ ನಡೆಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿದ್ದರು’ ಎಂದು ವಿವರಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಎನ್.ಆರ್.ಭಾನುಮೂರ್ತಿ ಭಾಗವಹಿಸಿದ್ದರು.

ಪ್ರಥಮ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ನಿಹಾರಿಕಾ ಚೌಧರಿ ಧನುಶಾ ಪ್ರಭು ಮೀರಾ ಮೋಹನ್ ಪ್ರಖರ್‌ ರಾಣಾ  –ಪ್ರಜಾವಾಣಿ ಚಿತ್ರ

ಚಿನ್ನದ ಪದಕ ಪಡದ ನಾಲ್ವರೂ ಉದ್ಯೋಗದಲ್ಲಿ..

ಪ್ರಥಮ ಘಟಿಕೋತ್ಸವದಲ್ಲಿ ನಾಲ್ವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು. ನಾಲ್ವರೂ ವಿವಿಧ ಕಂಪನಿಗಳ ಉದ್ಯೋಗಿಗಳಾಗಿದ್ದಾರೆ.

2017–18ನೇ ಸಾಲಿನ ಬಿಎಸ್‌ಸಿ ಹಾನರ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ ನಿಹಾರಿಕಾ ಚೌಧರಿ ಪ್ರಥಮ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. 2020–21ನೇ ಸಾಲಿನ ಎಂಎಸ್‌ಸಿ ಎಕನಾಮಿಕ್ಸ್‌ನಲ್ಲಿ ಧನುಷ್‌ ಪ್ರಭು ಚಿನ್ನದ ಪದಕ ಪಡೆದರು. ಅವರು ಕ್ಯಾಂಟರ್‌ ಐಎಂಆರ್‌ಬಿಯಲ್ಲಿ ಸಂಶೋಧನಾ ವ್ಯವಸ್ಥಾಪಕರಾಗಿದ್ದಾರೆ. 2021–22ನೇ ಸಾಲಿನ ಎಂಎಸ್‌ಸಿ ಎಕನಾಮಿಕ್ಸ್‌ನಲ್ಲಿ ದೆಹಲಿ ನಿವಾಸಿ ಪ್ರಖರ ರಾಣಾ ಚಿನ್ನದ ಪದಕ ಪಡೆದಿದ್ದಾರೆ. ಅವರು ಇವೈ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. 5 ವರ್ಷದ ಸಂಯೋಜಿತ ಎಂಎಸ್‌ಸಿ ಎಕನಾಮಿಕ್ಸ್‌ನಲ್ಲಿ ಮೀರಾ ಮೋಹನ್‌ ಚಿನ್ನದ ಪದಕ ಪಡೆದಿದ್ದು ಅವರು ಮುಂಬೈಯ ಕ್ರಿಸಿಲ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದರೆ ಕಲಿಕೆ ಪೂರ್ಣಗೊಳ್ಳುವ ಮೊದಲೇ ಕ್ಯಾಂಪಸ್‌ ಸೆಲೆಕ್ಸನ್‌ನಲ್ಲಿ ಉದ್ಯೋಗಗಳಿಗೆ ಆಯ್ಕೆ ಮಾಡಲಾಗುತ್ತದೆ. ವಿಜ್ಞಾನ ತೆಗೆದುಕೊಂಡವರು ಅರ್ಥಶಾಸ್ತ್ರದಲ್ಲಿ ಓದಿದವರಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಬಿಎಸ್‌ಸಿ ಹಾನರ್ಸ್‌ ವಿಭಾಗದಲ್ಲಿ 3ನೇ ರ‍್ಯಾಂಕ್ ಪಡೆದ ಮಂಜುಶ್ರೀ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.