ADVERTISEMENT

ಭಾರತ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:28 IST
Last Updated 21 ಜೂನ್ 2024, 16:28 IST
<div class="paragraphs"><p> ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಸಾರ್ವಜನಿಕ ಜೀವನದಲ್ಲಿ ದುಡಿಯುವ ವ್ಯಕ್ತಿಗಳು ತಮ್ಮ ನಾಲಗೆಯ ಮೇಲೆ ನಿಯಂತ್ರಣ ಹೊಂದಿರಬೇಕು’ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿರುವ ಹೈಕೋರ್ಟ್‌, ‘ಜ್ಞಾನ ಮತ್ತು ಜ್ಞಾನವಂತರನ್ನು ದ್ವೇಷಿಸುವ ಯಾವುದೇ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ’ ಎಂಬ ಲೇಖಕ ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ’ ಕಾದಂಬರಿಯ ಸಾಲುಗಳನ್ನು ಮುಕ್ತ ಕಲಾಪದ ವೇಳೆ ಉದ್ಧರಿಸಿತು.

‘ನಮ್ಮ ವಿರುದ್ಧ ನಗರದ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್‌ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ ‘ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘ’ದ ಸು.ವೆಂಕಟೇಶನ್‌ ಸೇರಿದಂತೆ ಮೂವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಆಯೋಜಕರು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಅಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ದೂರುದಾರರು ಕೋರ್ಟ್‌ನಲ್ಲಿ ದಾಖಲಿಸಿರುವ ಸ್ವಯಂ ಹೇಳಿಕೆಯಲ್ಲಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವಂತಹ ಯಾವುದೇ ಗುರುತರ ಆರೋಪಗಳು ಇಲ್ಲ. ಆದ್ದರಿಂದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಭರತ ಭೂಮಿ‌, ಪುಣ್ಯ ಭೂಮಿ. ಇಂತಹ ಪವಿತ್ರವಾದ ಭೂಮಿ ಕೇವಲ‌ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ ಮತ್ತು ಧರ್ಮಕ್ಕೆ ಸೇರಿದ್ದು ಎಂಬುದನ್ನು ನಿಮ್ಮ ಕಕ್ಷಿದಾರರು ಮರೆಯಬಾರದು’ ಎಂದು ಬುದ್ಧಿಮಾತು ಹೇಳಿತು. ವಿಚಾರಣಾ ಕೋರ್ಟ್‌ನ ಎಲ್ಲ ಪ್ರಕ್ರಿಯೆಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಿತು. ದೂರುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ‘ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿದ್ದರು. ‘ಸನಾತನ  ಧರ್ಮ‌ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು’ ಎಂದು ಹೇಳಿದ್ದರು.

ಈ ಕಾರ್ಯಕ್ರಮವನ್ನು ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘ ಆಯೋಜಿಸಿತ್ತು. ಸಚಿವರ ಹೇಳಿಕೆಯನ್ನು ಆಕ್ಷೇಪಿಸಿದ್ದ ನಗರದ ಬೆಳತ್ತೂರು ಕಾಲೋನಿಯ ವಿ.ಪರಮೇಶ್‌, ‘ಈ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ’ ಎಂದು ಆರೋಪಿಸಿ ಖಾಸಗಿ ದೂರು ಸಲ್ಲಿಸಿದ್ದರು. 

ದೂರಿನ ಅನುಸಾರ ಭಾರತೀಯ ದಂಡ ಸಂಹಿತೆ–1860ರ ಕಲಂ 153, 298 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.