ಬೆಂಗಳೂರು: ‘ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇನ್ನಾದರೂ ಸಂವಿಧಾನ ಬದಲಾವಣೆಯನ್ನು ಕೈ ಬಿಟ್ಟು, ದೇಶದಲ್ಲಿ ಉತ್ತಮ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರೊ. ಬಿಕೆ–88’ ಸಂಘರ್ಷ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
‘ಚುನಾವಣೆಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಎಚ್ಚೆತ್ತುಕೊಂಡು ಮತ ಹಾಕಿದ್ದರಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತಿನಿಂದ ಅಸ್ಸಾಂವರೆಗೆ ಸಂವಿಧಾನದ ಬದಲಾವಣೆ ಹೇಳಿಕೆಯ ಬಿಸಿ ತಟ್ಟಿದೆ. ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದವರೇ ಈಗ ಸಂವಿಧಾನದ ಪ್ರತಿಗೆ ನಮಸ್ಕರಿಸಿದ್ದಾರೆ. ಹೀಗಾಗಿ, ಮುಂದಿನ ಐದು ವರ್ಷಗಳಲ್ಲಿ ಸಂವಿಧಾನಕ್ಕೆ ಅಪಾಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದರು.
‘ನೂತನ ಸರ್ಕಾರವು ಸಮಾಜದಲ್ಲಿ ಸಮಾನತೆಯನ್ನು ತರುವ ಕೆಲಸ ಮಾಡಬೇಕು. ಯಾವುದೇ ಧರ್ಮವನ್ನು ದ್ವೇಷಿಸಬಾರದು. ಹಿಂದುಳಿದ, ದಲಿತ ಸಮುದಾಯಕ್ಕೆ ಮತ್ತಷ್ಟು ಸವಲತ್ತುಗಳನ್ನು ನೀಡಬೇಕಿದೆ. ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಬೇಕಾಗಿದೆ. ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕಾಗಿದೆ. ಆ ನಿಟ್ಟಿನಲ್ಲಿ ಕೂಡ ನಮ್ಮ ಹೋರಾಟ ಇರಲಿದೆ’ ಎಂದು ಹೇಳಿದರು.
‘ದಲಿತ ಸಂಘರ್ಷ ಸಮಿತಿ ಕಟ್ಟಿದ ಪ್ರೊ.ಬಿ.ಕೃಷ್ಣಪ್ಪ ಅವರು ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬಿದರು. ಅಂಬೇಡ್ಕರ್ ವಾದವನ್ನು ಹಳ್ಳಿ ಹಳ್ಳಿಗೂ ತಲುಪಿಸಿದರು’ ಎಂದು ಸ್ಮರಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಧರ್ಮ ಧ್ರುವೀಕರಣಕ್ಕೆ ಕಾರಣವಾಗಿದೆ’ ಎಂದು ವಾಗ್ದಾಳಿ ನಡೆಸಿದರು.
Highlights - ಸಚಿವರು ಹೇಳಿದ್ದು... ಸಂವಿಧಾನ ಬದಲಿಸುವ ಮಾತನಾಡಿದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಹೊಸ ಸರ್ಕಾರವು ಸಮಾಜದಲ್ಲಿ ಸಮಾನತೆ ತರಲಿ ಪ್ರೊ.ಬಿ.ಕೃಷ್ಣಪ್ಪ ಅವರು ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.