ಬೆಂಗಳೂರು: ‘ನಮ್ಮ ದೇವಾಲಯಗಳನ್ನು ಧ್ವಂಸ ಮಾಡಿದವರನ್ನು ಇತಿಹಾಸದ ಪುಟಗಳಲ್ಲಿ ನಾಯಕರ ರೀತಿ ಬಿಂಬಿಸಲಾಗಿದೆ. ನಮ್ಮ ಪೂರ್ವಜನರಿಗೆ ಆಗಿರುವ ಅನ್ಯಾಯವನ್ನು ಕಾನೂನುಬದ್ಧ ಹೋರಾಟದ ಮೂಲಕ ಸರಿಪಡಿಸಿ, ಇತಿಹಾಸದ ಸತ್ಯ ದರ್ಶನ ಮಾಡಿಸಬೇಕು’ ಎಂದು ಇತಿಹಾಸಕಾರ ವಿಕ್ರಮ್ ಸಂಪತ್ ತಿಳಿಸಿದರು.
ಸಾಹಿತ್ಯ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ‘ಶಿವನಿಗಾಗಿ ಕಾಯುತ್ತ’ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಕಾಶಿಯ ವಿಶ್ವನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಧ್ವಂಸ ಪ್ರಯತ್ನಗಳನ್ನು ನಡೆಸಿದಾಗಲೆಲ್ಲ ಪುನರ್ ನಿರ್ಮಾಣದ ಕಾರ್ಯ ನಡೆದಿದೆ. ಮೊಘಲ್ ಸಾಮ್ರಾಟ ಔರಂಗಜೇಬ್ ದಾಳಿಯ ಮುನ್ನವೇ ಹಲವರು ನಿರಂತರ ದಾಳಿ ನಡೆಸಿರುವ ಬಗ್ಗೆ ಪುರಾವೆಗಳು ಇತಿಹಾಸದಲ್ಲಿ ದೊರೆಯುತ್ತವೆ. ದೇವಾಲಯದ ಭಗ್ನಾವಶೇಷ ನೋಡಿ ಹಿಂದೂಗಳ ಮನಸ್ಸಿಗೆ ನೋವಾಗಬೇಕೆಂಬ ಕಾರಣಕ್ಕೇ ದೇವಾಲಯದ ಗೋಪುರಗಳನ್ನು ಕೆಡವಿ, ಆ ಸ್ಥಾನದಲ್ಲಿ ಗುಂಬಜ್‌ಗಳನ್ನು ಅಳವಡಿಸಲಾಯಿತು. ಅದಕ್ಕೆ ಜ್ಞಾನವಾಪಿ ಮಸೀದಿಯೆಂಬ ಹೆಸರಿಡಲಾಯಿತು’ ಎಂದು ಹೇಳಿದರು.
‘ಎಡಪಂಥೀಯ ಇತಿಹಾಸಕಾರರು ಇತಿಹಾಸವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ಯಾವುದೇ ಆಧಾರ ಇಲ್ಲದೆ ‘ಚಂದಮಾಮ ಕಥೆ’ಗಳನ್ನು ಹೆಣೆದಿದ್ದಾರೆ. ಇತಿಹಾಸ ಎನ್ನುವುದು ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿ. ಅದನ್ನು ಒಡೆದು ಹಾಕಿದರೆ, ನಮ್ಮ ಮುಖ ಹೇಗೆ ಕಾಣುತ್ತದೆ? ಇತಿಹಾಸವನ್ನು ಸರಿಪಡಿಸುವ ಮೊದಲು ಇತಿಹಾಸದಲ್ಲಿನ ತಪ್ಪುಗಳನ್ನು ಒಪ್ಪಿಕೊಳ್ಳುವ ಕೆಲಸವಾಗಬೇಕು’ ಎಂದರು.
‘ಶಾಲಾ ಪಠ್ಯದಲ್ಲಿ ಔರಂಗಜೇಬ್ ಜಾತ್ಯತೀತ ನಾಯಕನೆಂದು ಬಿಂಬಿಸಲಾಯಿತು. ನಮ್ಮ ದೇವಾಲಯಗಳನ್ನು ಧ್ವಂಸ ಮಾಡಿದವನನ್ನು ಜಾತ್ಯತೀತ ನಾಯಕನೆಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಘಜ್ನಿ, ಘೋರಿ, ಟಿಪ್ಪು ಸುಲ್ತಾನ್ ಮಾಡಿದ ದುಷ್ಕೃತ್ಯಗಳಿಗೆ ಈಗಿನ ಮುಸ್ಲಿಮರು ಹೊಣೆಗಾರರಲ್ಲ. ಹಿಂದೂ ಸಮಾಜದ ಮೇಲೆ ದಾಳಿ ಮಾಡಿದ ಅಂತಹವರನ್ನು ಮುಸ್ಲಿಮರು ತಮ್ಮ ನಾಯಕರೆಂದು ಪರಿಗಣಿಸಿದರೆ ಭ್ರಾತೃತ್ವ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.
ಸಂವಾದವನ್ನು ಪತ್ರಕರ್ತ ಅಜಿತ್ ಹನುಮಕ್ಕನವರ್ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.