ಬೆಂಗಳೂರು: ಥಾಯ್ಲೆಂಡ್‌ನ ನ್ಯಾಮ್‌ಡಕ್, ಗೌರಮತಿ, ರೆಡ್ ಐವರಿ, ಜಪಾನಿನ ಮಿಯಾಜಾಕಿ ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಮಾವಿನ ತಳಿಯ ಹಣ್ಣುಗಳು, ನೂರಾರು ತಳಿಗಳ ಬಾಳೆ–ಹಲಸಿನ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಕಲ್ಪಿಸಿದೆ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್).
ಹೌದು, ಹೆಸರಘಟ್ಟದ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ತಿರುಚ್ಚಿಯ ಬಾಳೆ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಆಯೋಜಿಸಿರುವ ‘ತ್ರಿಫಲ ವೈವಿಧ್ಯ ಮೇಳ‘ದಲ್ಲಿ ಬಾಳೆ, ಮಾವು ಹಾಗೂ ಹಲಸಿನ ತಳಿ ವೈವಿಧ್ಯ ಲೋಕವೇ ಅನಾವರಣಗೊಂಡಿದೆ. ಶುಕ್ರವಾರದಿಂದ ಶುರುವಾಗಿರುವ ಈ ಮೇಳ ಮೂರು ದಿನಗಳವರೆಗೂ ನಡೆಯಲಿದೆ. ಮೇಳಕ್ಕೆ ಭೇಟಿ ನೀಡಿದವರಿಗೆ ತಳಿಗಳ ವೈವಿಧ್ಯದ ದರ್ಶನದ ಜೊತೆಗೆ, ಮಾಹಿತಿಯೂ ಲಭ್ಯವಿದೆ.
ಮೇಳದಲ್ಲಿ ಭೌಗೋಳಿಕ ಮಾನ್ಯತೆ ಹೊಂದಿರುವ (ಜಿಐ ಟ್ಯಾಗ್) ಕರ್ನಾಟಕದ ನಂಜನಗೂಡಿನ ರಸಬಾಳೆ, ಕಮಲಾಪುರದ ಕೆಂಪುಬಾಳೆ, ಕನ್ಯಾಕುಮಾರಿಯ ಮಟ್ಟಿ ಸಿರುಮಲೈ, ತಮಿಳುನಾಡಿನ ವಿರೂಪಾಕ್ಷಿ ಬಾಳೆ, ಗೋವಾದ ಮೈನಡೋಲಿ, ಕೇರಳದ ತ್ರಿಶೂರನ ಚಂಗಲಿಕೊಡನ್ ಬಾಳೆ, ಮಹಾರಾಷ್ಟ್ರದ ಜಲಗಾಂವ್ ಜಿಐ ಟ್ಯಾಗ್ ಪಡೆದ ಬಾಳೆ ಹಣ್ಣುಗಳ ದರ್ಬಾರ ಜೋರಾಗಿದೆ. 100ಕ್ಕೂ ಹೆಚ್ಚಿನ ಬಾಳೆ ಹಣ್ಣುಗಳ ಪ್ರದರ್ಶನ ನೋಡಗರ ಗಮನ ಸೆಳೆಯುತ್ತಿದೆ.
ಈ ಬಾಳೆ ವೈವಿಧ್ಯದಲ್ಲಿ ‘ಪರಿಮಳ‘ದಿಂದಲೇ ಗಮನ ಸೆಳೆದಿದ್ದು ಕಾವೇರಿ ಸುಗಂಧಂ ಬಾಳೆ. ಇದು ತಮಿಳುನಾಡಿನ ಕೊಲ್ಲಿ ಬೆಟ್ಟಗಳ ಪ್ರದೇಶದಲ್ಲಿ ಬೆಳೆಯುವ ತಳಿ. ಈ ತಳಿಯ ಹಣ್ಣನ್ನು ಕತ್ತರಿಸಿ ಇಟ್ಟರೆ,100 ಮೀಟರ್‌ವರೆಗೂ ಪರಿಮಳ ಪಸರಿಸುತ್ತದೆ.
ಮಾವಿನ ತಳಿಗಳ ಲೋಕ: ಪ್ರದರ್ಶನದಲ್ಲಿ ಮಹಾರಾಷ್ಟ್ರದ ಅಲ್ಫಾನ್ಸೊ, ಅಂಕೋಲಾದ ಕರಿಇಶಾದ್, ರತ್ನಗಿರಿ ಸೇರಿದಂತೆ 10ಕ್ಕೂ ಹೆಚ್ಚು ಬಗೆಯ ಜಿಐ ಟ್ಯಾಗ್ ಪಡೆದಿರುವ ಮಾವಿನ ಹಣ್ಣುಗಳಿವೆ. ದೇಶ–ವಿದೇಶ, ಪ್ರಾದೇಶಿಕವಾಗಿ ಬೆಳೆಯುವ 300ಕ್ಕೂ ಹೆಚ್ಚು ಮಾವಿನ ತಳಿಗಳ ಹಣ್ಣುಗಳು ಪ್ರದರ್ಶನದಲ್ಲಿವೆ. ಇವುಗಳ ಜೊತೆಗೆ, ಕರ್ನಾಟಕದ ವಿಶಿಷ್ಟ ತಳಿ ಅಪ್ಪೆಮಿಡಿಯೂ ಇದೆ. ಉಪ್ಪಿನಕಾಯಿಗೆ ಬಳಸುವ ಮಾವಿನ ತಳಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಮಾವಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿವೆ.
ಹಲಸು ವೈವಿಧ್ಯ : ನೂರು ವಿವಿಧ ಬಗೆಯ ಹಲಸಿನ ಹಣ್ಣು ಹಾಗೂ ಅದರ ಸಸಿಗಳು ಪ್ರದರ್ಶನ ಮತ್ತು ಮರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಲಸಿನ ಹಣ್ಣಿನ ತೊಳೆಯ ಬಣ್ಣ, ತೂಕ, ರುಚಿ, ಗಾತ್ರದ ಆಧಾರದ ವೈಶಿಷ್ಟ್ಯದ ಮೇಲೆ ಆಯ್ಕೆ ಮಾಡಲಾದ ಹಣ್ಣುಗಳ ಮೇಳದಲ್ಲಿವೆ. 40 ಕೆ.ಜಿಗಿಂತ ಹೆಚ್ಚು ತೂಕವಿರುವ ಹಾಗೂ ದೊಡ್ಡ ಗಾತ್ರದ ಹಲಸಿನ ಹಣ್ಣು ಮತ್ತು ನೂರಾರು ಬಗೆಯ ಮಾವು ಮತ್ತು ಬಾಳೆ ಹಣ್ಣುಗಳನ್ನು ಮೇಳಕ್ಕೆ ಬಂದಿದ್ದ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.
ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರೈತರು ಮೇಳದಲ್ಲಿ ಭಾಗವಹಿಸಿ, ವಿಜ್ಞಾನಿಗಳಿಂದ ಹಣ್ಣುಗಳು ಮತ್ತು ಅವುಗಳ ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಾಳೆ ಹಣ್ಣಿನ ಶ್ಯಾಂಪೂ ಸಾಬೂನ್
ತಿರುಚ್ಚಿಯ ಬಾಳೆ ಸಂಶೋಧನಾ ಕೇಂದ್ರದವು ಬಾಳೆಯಿಂದ ತಯಾರಿಸಿದ ಶ್ಯಾಂಪೂ ಸಾಬೂನ್ ಮುಖಕ್ಕೆ ಹಚ್ಚುವ ಕ್ರೀಂ ಸೇರಿದಂತೆ ಇತರೆ ಮೌಲ್ಯವರ್ಧಿತ ಉತ್ಪನ್ನಗಳು ತ್ರಿಫಲ ಪ್ರದರ್ಶನ ಮೇಳದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಮುಖಕ್ಕೆ ಹಚ್ಚುವ 50 ಗ್ರಾಂ ಕ್ರೀಂಗೆ ₹399 100 ಎಂ.ಎಲ್ ಶ್ಯಾಂಪೂಗೆ ₹349 100 ಗ್ರಾಂ ಸಾಬೂನಿಗೆ ₹149 ದರವಿದೆ. ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ6 ವಿಟಮಿನ್ ಸಿ ಪೊಟ್ಯಾಸಿಯಂ ಡಯಟರಿ ಫೈಬರ್ ಮತ್ತು ಮೆಗ್ನೀಷಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆ ಹಣ್ಣು ಕೇವಲ ತಿನ್ನುವುದಕ್ಕಷ್ಟೇ ಅಲ್ಲದೇ ಸೌಂದರ್ಯ ಚಿಕಿತ್ಸೆಗೂ ಬಳಸಬಹುದು ಎಂದು ಕೇಂದ್ರದ ಹರೀಶ್ವರ ಮಾಹಿತಿ ಮಾಹಿತಿ ನೀಡಿದರು.
ಕಡಿಮೆ ಕೊಬ್ಬಿನಂಶದ ಬಾಳೆ ಚಿಪ್ಸ್
ಬಾಳೆ ಹಣ್ಣಿನಿಂದ ತಯಾರಿಸುವ ಲೋಫ್ಯಾಟ್ ಬಾಳೆ ಚಿಪ್ಸ್ ತಂತ್ರಜ್ಞಾನವನ್ನು ತಮಿಳುನಾಡಿನ ತಿರುಚ್ಚಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ ಮಾರುಕಟ್ಟೆಗೆ ಪರಿಚಯಿಸಿದೆ. ‘ಈ ತಂತ್ರಜ್ಞಾನದ ಮೂಲಕ ಶೇ 25ರಷ್ಟು ಕಡಿಮೆ ಎಣ್ಣೆ ಬಳಸಿಕೊಂಡು ಕಡಿಮೆ ಕೊಬ್ಬಿನಂಶವಿರುವ ಬಾಳೆ ಚಿಪ್ಸ್‌ಗಳನ್ನು ತಯಾರಿಸಲಾಗುತ್ತಿದೆ. ಈ ಚಿಪ್ಸ್‌ನಲ್ಲಿ ರುಚಿ ಪರಿಮಳ ಬಣ್ಣದಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ’ ಎಂದು ವಿಜ್ಞಾನಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.