ಬೆಂಗಳೂರು: ಟೀ ಶರ್ಟ್ ಮೇಲೆ ಚಿತ್ರ ಬಿಡಿಸುವುದು ಹೇಗೆ ? ಆಹ್ವಾನ ಪತ್ರಿಕೆಗಳ ಮೇಲೂ ಪೇಂಟ್ ಮಾಡಬಹುದಾ ? ಗೋಡೆಗೆ ತೂಗು ಹಾಕುವ ಕಲಾಕೃತಿಗಳನ್ನು ಮಾಡುವುದು ಹೇಗೆ.. ? ಈ ಬಗ್ಗೆ ಮಕ್ಕಳಿಗೆ ಇರುವ ಕುತೂಹಲವನ್ನು ತಣಿಸುವ ಕಾರ್ಯವನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು (ಐಐಎಫ್‌ಟಿ) ಇತ್ತೀಚೆಗೆ ಹಮ್ಮಿಕೊಂಡಿತ್ತು.
ಹೆಸರಘಟ್ಟದಲ್ಲಿರುವ ಸ್ಪರ್ಶ ಟ್ರಸ್ಟ್‌ನ 60 ಮಕ್ಕಳಿಗೆ ಈ ಕುರಿತು ತರಬೇತಿ ಕಾರ್ಯಾಗಾರವನ್ನು ಐಐಎಫ್‌ಟಿ ಹಮ್ಮಿಕೊಂಡಿತ್ತು. ಕಟ್ಟಡ ಕಾರ್ಮಿಕರ, ಏಕಪೋಷಕರಿರುವ ಮತ್ತು ಶೋಷಿತ ಮಕ್ಕಳು ಈ ಟ್ರಸ್ಟ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಆಲಂಕಾರಿಕ ವಸ್ತುಗಳನ್ನು ರೂಪಿಸುವುದು, ಸ್ಕ್ರೀನ್‌ಪ್ರಿಂಟಿಂಗ್, ಸ್ಟಿನ್ಸಿಲ್ ಪ್ರಿಂಟಿಂಗ್ ಕುರಿತು ಸಂಸ್ಥೆಯ 20 ಸಿಬ್ಬಂದಿ ಮಕ್ಕಳಿಗೆ ತರಬೇತಿ ನೀಡಿದರು.
‘ಮಕ್ಕಳ ಕುತೂಹಲ ತಣಿಸುವ ಉದ್ದೇಶವನ್ನು ಈ ಉಚಿತ ಕಾರ್ಯಾಗಾರ ಹೊಂದಿದೆ. ಆಸಕ್ತಿ ಇರುವವರು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಈ ಕುರಿತು ಕೋರ್ಸ್ ತೆಗೆದುಕೊಳ್ಳಬಹುದು. ಸ್ವಉದ್ಯೋಗ ಕೈಗೊಳ್ಳಲೂ ಈ ಕೌಶಲ ನೆರವಾಗಲಿದೆ’ ಎಂದು ಐಐಎಫ್‌ಟಿಯ ಸಹಾಯಕ ಪ್ರಾಧ್ಯಾಪಕಿ ಶ್ರೀಲಕ್ಷ್ಮಿ ಹೇಳಿದರು.
ಬಾಗಿಲು ಪರದೆ, ಸೋಫಾ, ಟೇಬಲ್ ಮೇಲೆ ಹಾಕುವ ವಸ್ತ್ರಗಳ ಮೇಲೂ ಕಲಾಕೃತಿ ಅಥವಾ ಸ್ಕ್ರೀನ್ ಪ್ರಿಂಟಿಂಗ್ ಮಾಡುವ ಬಗ್ಗೆಯೂ ಹೇಳಿಕೊಡಲಾಯಿತು. 10ರಿಂದ 14 ವರ್ಷದ ಮಕ್ಕಳು ಕಾರ್ಯಾಗಾರದ ಉಪಯೋಗ ಪಡೆದುಕೊಂಡರು.
ಹೊಸ ಅನ್ವೇಷಣೆಗಳ ಮೂಲಕ ಸಾಮಾಜಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಬಿ. ವೇದಗಿರಿಯವರು 2001ರಲ್ಲಿ ಈ ಐಐಎಫ್‌ಟಿ ಸ್ಥಾಪಿಸಿದ್ದರು. ಸಂಸ್ಥೆಯು ವಸ್ತ್ರವಿನ್ಯಾಸ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಲ್ಲದೆ, ಅಂದಿನಿಂದಲೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.