ADVERTISEMENT

ವಾಟ್ಸ್‌ಆ್ಯಪ್‌ ಯುನಿವರ್ಸಿಟಿಯಲ್ಲಿ ನಿಜ ತಿಳಿಸುವುದು ಕಷ್ಟ: ವಿಶ್ವನಾಥನ್‌ ಆನಂದ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:28 IST
Last Updated 15 ಜುಲೈ 2024, 15:28 IST
<div class="paragraphs"><p>ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಘಟಿಕೋತ್ಸವದಲ್ಲಿ ಐಐಎಸ್‌ಸಿ ವಿಜ್ಞಾನ ವಿಭಾಗದ ಡೀನ್ ಎಸ್.ಅಶೋಕನ್, ಕುಲಸಚಿವ ಕ್ಯಾಪ್ಟನ್ ಶ್ರೀಧರ್ ವಾರಿಯರ್, ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್, ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್ ಆನಂದ್  ಭಾಗವಹಿಸಿದ್ದರು</p></div>

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಘಟಿಕೋತ್ಸವದಲ್ಲಿ ಐಐಎಸ್‌ಸಿ ವಿಜ್ಞಾನ ವಿಭಾಗದ ಡೀನ್ ಎಸ್.ಅಶೋಕನ್, ಕುಲಸಚಿವ ಕ್ಯಾಪ್ಟನ್ ಶ್ರೀಧರ್ ವಾರಿಯರ್, ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್, ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್ ಆನಂದ್ ಭಾಗವಹಿಸಿದ್ದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಈಗಿನ ಕಾಲದಲ್ಲಿ ಎಲ್ಲರೂ ವಾಟ್ಸ್‌ಆ್ಯಪ್‌ ಯುನಿವರ್ಸಿಟಿಯ ಪದವೀಧರರಾಗಿದ್ದಾರೆ. ಇಂಥ ಕಾಲದಲ್ಲಿ ವೈಜ್ಞಾನಿಕ ಸತ್ಯವನ್ನು ತಿಳಿಸುವುದು ಕಷ್ಟ. ಆದರೆ, ನಿಜವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಲೇಬೇಕು’ ಎಂದು ಫಿಡೆ ಉಪಾಧ್ಯಕ್ಷ, ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ತಿಳಿಸಿದರು.

ADVERTISEMENT

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಘಟಿಕೋತ್ಸವದಲ್ಲಿ ಸೋಮವಾರ ಅವರು ಮಾತನಾಡಿದರು.

‘ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಗಳನ್ನು ಸುಳ್ಳು ಹರಡಲು ಬಳಸುತ್ತಿದ್ದಾರೆ. ಸತ್ಯ ಶೋಧಿಸಿ ಅದೇ ತಂತ್ರಜ್ಞಾನ, ಎಐಗಳ ಮೂಲಕ ನಿಜ ಹೇಳಿದರೆ ಸಾಲದು. ಅದನ್ನು ಜನರಿಗೆ ಮನವರಿಕೆ ಮಾಡಬೇಕು. ಅದಕ್ಕೆ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾನು 6 ವರ್ಷದ ಬಾಲಕನಾಗಿದ್ದಾಗಲೇ ತಾಯಿ ಚೆಸ್‌ ಕಲಿಸಿಕೊಟ್ಟರು. ಮುಂದೆ ಚೆಸ್‌ ಬಗ್ಗೆ ಆಸಕ್ತಿ ವಹಿಸಿದೆ. ನಾನು ಆಡಿದ ಆಟದ ಬಗ್ಗೆ ನೋಟ್‌ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದೆ. ಅದೇ  ನನಗೆ ಅಧ್ಯಯನ ವಸ್ತುವಾಗುತ್ತಿತ್ತು. ಹಾಗಾಗಿಯೇ ಗ್ರ್ಯಾಂಡ್‌ ಮಾಸ್ಟರ್ ಆಗಲು ಸಾಧ್ಯವಾಯಿತು. ಹಿಂದೆ ಚೆಸ್‌ಗೆ ಸರಳವಾದ ನಿಯಮಗಳಿದ್ದವು. ಆಧುನಿಕ ಸಿದ್ದಾಂತವು ಬೇರೆ ಬೇರೆ ವಿಧಾನಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.

‘ಕಂಪ್ಯೂಟರ್‌ ಯುಗ ಆರಂಭವಾದಾಗ ಚೆಸ್‌ಗೆ ಹೆಚ್ಚು ಉಪಯೋಗವಾಯಿತು. ಚೆಸ್‌ಗೆ ಸಂಬಂಧಿಸಿದಂತೆ ಕಂಪ್ಯೂಟರ್‌ನಲ್ಲಿ ಕೋಟಿ ದತ್ತಾಂಶಗಳಿವೆ. ಚೆಸ್‌ ಎನ್ನುವುದು ಲೆಕ್ಕಾಚಾರ. ಯಾವ ನಡೆಯ ಪರಿಣಾಮ ಏನು ಎಂಬುದನ್ನು ಅರ್ಥ ಮಾಡಿಕೊಂಡು ಆಡಬೇಕಾಗುತ್ತದೆ’ ಎಂದು ವಿವರಿಸಿದರು.

ಚೆಸ್ ಮತ್ತು ವಿಜ್ಞಾನದ ನಡುವೆ ಹಲವು ಸಾಮ್ಯತೆಗಳಿವೆ. ಎರಡೂ ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ಅದಕ್ಕೆ ಸರಿಯಾಗಿ ನಾವೂ ಒಗ್ಗಿಕೊಳ್ಳಬೇಕು. ಚೆಸ್‌ನಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಾ ಹೊಸ ತಂತ್ರಗಾರಿಕೆಯಿಂದಾಗುವ ಪರಿಣಾಮಗಳನ್ನು ಗಮನಿಸುತ್ತಾ ಸಾಗಬೇಕು. ಅದೇ ರೀತಿ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿಯೂ ಹೊಸ ಆವಿಷ್ಕಾರಗಳನ್ನು ನಡೆಸುತ್ತಲೇ ಅದರ ಪರಿಣಾಮ ಏನು ಎಂಬುದನ್ನು ತಿಳಿದುಕೊಂಡು ಸಾಗಬೇಕು. ಚೆಸ್‌ ಮತ್ತು ವಿಜ್ಞಾನ ತನ್ನದೇ ಆದ ಭಾಷೆಯನ್ನೂ  ಹೊಂದಿದೆ ಎಂದು ಹೇಳಿದರು.

ಐಐಎಸ್‌ಸಿ ಕೌನ್ಸಿಲ್ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲನ್ ಅವರು ವರ್ಚುವಲ್‌ ಮೂಲಕ ಮಾತನಾಡಿ, ‘ನಾವು ಅತ್ಯುತ್ತಮ ತಂತ್ರಜ್ಞಾನ ಹೊಂದಿದ್ದೇವೆ. ಇದು ಹೊಸ ನಾಯಕತ್ವ, ಸಂಶೋಧನೆ, ಉತ್ಪನ್ನ ಮತ್ತು ಮತ್ತಷ್ಟು ತಂತ್ರಜ್ಞಾನ ಸೃಷ್ಟಿಸಲು ಅವಕಾಶ ಒದಗಿಸುತ್ತದೆ’ ಎಂದು ತಿಳಿಸಿದರು.

ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ 57 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಿಎಚ್‌.ಡಿ ಮತ್ತು ಸ್ನಾತಕೋತ್ತರ ಪದವಿ ಪಡೆದ 1036 ವಿದ್ಯಾರ್ಥಿಗಳಿಗೆ, ಪದವೀಧರ 100 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಡೀನ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.