ADVERTISEMENT

ಕಪ್ಪು ಪಟ್ಟಿ ಧರಿಸಿ ಬಂದ ವೈದ್ಯರು, ಭಾನುವಾರ ರಾತ್ರಿ 8ಕ್ಕೆ ದೀಪ ಬೆಳಗಲು ಕರೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 6:45 IST
Last Updated 21 ಆಗಸ್ಟ್ 2020, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ, ಪ್ರತಿಭಟನೆಯ ದ್ಯೋತಕವಾಗಿ ಇದೇ ಭಾನುವಾರ ರಾತ್ರಿ 8ಕ್ಕೆ ಎಲ್ಲರೂ ದೀಪ ಬೆಳಗಬೇಕು ಎಂದು ಕರೆ ನೀಡಿದೆ.

ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಸೇವೆಗೆ ಹಾಜರಾದ ವೈದ್ಯರು, ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

‘ಡಾ. ನಾಗೇಂದ್ರ ಅವರು ಕತ್ಯವ್ಯವೇ ಮೊದಲು ಎಂಬ ತತ್ವವನ್ನು ಪಾಲಿಸಿ,‌ ಸತತ ದುಡಿಯುತ್ತಿದ್ದರು. ಅವರ ಆತ್ಮಹತ್ಯೆ ನಿಜಕ್ಕೂ ‌ದಿಘ್ಭ್ರಮೆಯನ್ನು ಮೂಡಿಸಿದೆ. ನಿರಂತರ‌ ಒತ್ತಡ ಹಾಗೂ ಅತ್ಯಂತ ‌ಸಂಕೀರ್ಣ ವ್ಯವಸ್ಥೆಯ ನಡುವೆ‌ ಸೇವೆ ಸಲ್ಲಿಸುತ್ತಿರುವ ಅವರನ್ನು ಕಳೆದು‌ಕೊಂಡಿರುವುದು ವಿಷಾದನೀಯ. ಈ ರೀತಿಯ‌ ಅನಾಹುತಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸರ್ಕಾರವು ‌ವೈದ್ಯರನ್ನು ಬೆದರಿಸುವ, ಕಾನೂನಿನ‌‌ ಗುಮ್ಮ ತೋರಿಸುವುದನ್ನು‌ ಬಿಟ್ಟು, ಸೌಹಾರ್ದಯುತವಾಗಿ ನಡೆಸಿಕೊಳ್ಳಬೇಕು. ಈ ಘಟನೆಗೆ ಕಾರಣವಾದವರನ್ನು ಕೂಡಲೇ ಶಿಕ್ಷಿಸಬೇಕು’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಆಗ್ರಹಿಸಿದ್ದಾರೆ.

ADVERTISEMENT

‘ಈ ರೀತಿ ಘಟನೆಗಳು ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸಲಿದೆ. ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಹಾಗೂ ಮೇಲಾಧಿಕಾರಿಗಳ ಒತ್ತಡ ನಡೆಯುತ್ತಲೇ ಇದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿ ಘಟನೆಗಳು ಆಘಾತವನ್ನು ಉಂಟುಮಾಡುತ್ತಿವೆ. ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಒದಗಿಸುವ ಜತೆಗೆ ಅನಗತ್ಯವಾಗಿ ಒತ್ತಡ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಸಂಘದ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.