ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಭೆ ಗುರುವಾರ ದೆಹಲಿಯಲ್ಲಿ ನಡೆಯಲಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಸಂಘಟನೆ ವಿಚಾರ ಈ ಸಮಯದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆ ನಂತರ ಕೆಪಿಸಿಸಿ ಪದಾಧಿಕಾರಿಗಳನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು,ಹೊಸದಾಗಿ ನೇಮಕ ನಡೆದಿಲ್ಲ. ಪದಾಧಿಕಾರಿಗಳ ನೇಮಕ ಸಂಬಂಧ ಅಭಿಪ್ರಾಯ ಸಂಗ್ರ ಹಿಸಲುಮುಖಂಡ ಗುಲಾಂ ನಬಿ ಆಜಾದ್ ಬೆಂಗಳೂರಿಗೆ ಬಂದಿದ್ದರೂ, ಸಭೆ ನಡೆಸಲು ಸಾಧ್ಯವಾಗಿಲ್ಲ. ಈಗ ದೆಹಲಿಯಲ್ಲೇ ಚರ್ಚಿಸುವ ಸಾಧ್ಯತೆಗಳಿದ್ದು, ಯುವಕರು ಹಾಗೂ ಹೊಸ ಮುಖಗಳಿಗೆ ಪಟ್ಟಿಯಲ್ಲಿ ಆದ್ಯತೆ ನೀಡುವ ಕುರಿತು ಸೋನಿಯಾ ಅವರಿಗೆ ರಾಜ್ಯದ ಮುಖಂಡರು ವಿವರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆ ಜತೆಗೆ ಅನರ್ಹ ಶಾಸಕರ 17 ಕ್ಷೇತ್ರಗಳಿಗೆ ತಕ್ಷಣಕ್ಕೆ ಉಪಚುನಾವಣೆ ಎದುರಾದರೆ, ಮಾಡಿ ಕೊಂಡಿರುವ ಸಿದ್ಧತೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆ ಯಾಗಲಿದೆ. ಈ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಇರುವ ವಾತಾವರಣ, ಅನರ್ಹರು ಪಕ್ಷ ತೊರೆದ ನಂತರ ಕ್ಷೇತ್ರದಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಸೋನಿಯಾ ಗಾಂಧಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. 17 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ರಾಜ್ಯ ನಾಯಕರಿಗೆ ಕೆಲ ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಸೋಲಿನ ನಂತರ ಲೋಕಸಭೆ ಚುನಾವಣೆಯಲ್ಲೂ ಪಕ್ಷ ಹೀನಾಯವಾಗಿ ಸೋಲನ್ನಪ್ಪಿರುವುದು, ಮೈತ್ರಿ ಸರ್ಕಾರದ ಪತನ, ಅದರಿಂದ ಪಕ್ಷದ ಮೇಲಾಗಿರುವ ಪರಿಣಾಮ ಬಗ್ಗೆ ಚರ್ಚಿಸಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
ದೆಹಲಿಗೆ ಸಿದ್ದರಾಮಯ್ಯ
ಸೆ. 12ರಂದು ದೆಹಲಿಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಸಭೆ ನಡೆಯಲಿದ್ದು, ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಬುಧವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.