ADVERTISEMENT

ಈರುಳ್ಳಿ ‘ಆರೋಗ್ಯ’ ತಿಳಿಸುವ ಸಂವೇದನಾ ಸಾಧನ

ಸಂಪೂರ್ಣ ಉಕ್ಕಿನಿಂದ ಸಂಗ್ರಹ ಘಟಕ ಅಭಿವೃದ್ಧಿ ಪಡಿಸಿರುವ ಟಾಟಾ ಸ್ಟೀಲ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 23:02 IST
Last Updated 3 ಜನವರಿ 2020, 23:02 IST
ಟಾಟಾ ಸ್ಟೀಲ್‌ ಅಭಿವೃದ್ಧಿ ಪಡಿಸಿರುವ ಈರುಳ್ಳಿ ಸಂಗ್ರಹ ಘಟಕದ ಮಾದರಿ
ಟಾಟಾ ಸ್ಟೀಲ್‌ ಅಭಿವೃದ್ಧಿ ಪಡಿಸಿರುವ ಈರುಳ್ಳಿ ಸಂಗ್ರಹ ಘಟಕದ ಮಾದರಿ   

ಬೆಂಗಳೂರು: ದೇಶದಲ್ಲಿ ಉತ್ಪಾದನೆ ಯಾಗುವ ಒಟ್ಟು ಈರುಳ್ಳಿಯಲ್ಲಿ ಹೊಲದಿಂದ ಗ್ರಾಹಕರ ಕೈ ಸೇರುವ ಹಂತದಲ್ಲಿ ಶೇ 40ರಷ್ಟು ವ್ಯರ್ಥವಾಗುತ್ತದೆ. ಇದರಲ್ಲಿ ಕೊಳೆತು ಹೋಗುವ ಪ್ರಮಾಣವೇ ಹೆಚ್ಚು. ಸಂಗ್ರಹ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಮತ್ತೊಂದು ಕಾರಣ.

ಈ ನಿಟ್ಟಿನಲ್ಲಿ ಯೋಚಿಸಿರುವ ಟಾಟಾ ಸ್ಟೀಲ್‌, ಈರುಳ್ಳಿ ಸಂಗ್ರಹ ಘಟಕ ರೂಪಿಸಿದೆ. ಇದರಲ್ಲಿ ಶೇಖರಿಸಿ ಇಡುವ ಈರುಳ್ಳಿಯು ಯಾವ ಭಾಗದಲ್ಲಿ, ಎಷ್ಟು ಪ್ರಮಾಣದಲ್ಲಿ ಕೊಳೆಯುವ ಹಂತದಲ್ಲಿದೆ ಎಂಬ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶ ರವಾನಿಸುವ ವ್ಯವಸ್ಥೆ ಮಾಡಲಾಗಿದೆ.

‘ಈರುಳ್ಳಿ ಸಂಗ್ರಹಿಸಲು ನಿರ್ದಿಷ್ಟ ತಾಪಮಾನ ಮತ್ತು ಆರ್ದ್ರತೆ ಇರಬೇಕಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಘಟಕವನ್ನು ಅಭಿವೃದ್ಧಿಪಡಿಸಲಾಗಿದೆ. ಕಟ್ಟಿಗೆಯಿಂದ ಮಾಡಿದ ಘಟಕಗಳಾದರೆ, ತಂಪಾದ ವಾತಾವರಣಕ್ಕೆ ಹಾಳಾಗುತ್ತವಲ್ಲದೆ, ಈರುಳ್ಳಿಯೂ ಕೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಂಪೂರ್ಣವಾಗಿ ಉಕ್ಕಿನಿಂದ ಈ ಘಟಕವನ್ನು ನಿರ್ಮಾಣ ಮಾಡಲಾಗಿದೆ’ ಎಂದು ಟಾಟಾ ಸ್ಟೀಲ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಆರ್. ಚಕ್ರವರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಘಟಕದಲ್ಲಿ ಸಂವೇದನಾ ಸಾಧನಗಳನ್ನು (ಸೆನ್ಸಿಂಗ್‌ ಡಿವೈಸ್‌) ಅಳವಡಿಸಲಾಗಿರುತ್ತದೆ. ಈರುಳ್ಳಿಯ ಆರೋಗ್ಯದ ಕುರಿತು, ನೋಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನಿ ಸುವ ಕಾರ್ಯವನ್ನು ಈ ಸಾಧನಗಳು ಮಾಡುತ್ತವೆ. ಈರುಳ್ಳಿ ಕೊಳೆಯುವ ಹಂತಕ್ಕೆ ಬರುವ ಬಗ್ಗೆ ಎಚ್ಚರಿಕೆಯನ್ನು ಇವು ನೀಡುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬಹುದು’ ಎಂದು ಅವರು ತಿಳಿಸಿದರು.

‘ನೆಲದಿಂದ 3 ಅಡಿ ಎತ್ತರದಲ್ಲಿ ಸಂಗ್ರಹ ಘಟಕ ಇರುವಂತಹ ಮಾದರಿ ರೂಪಿಸಲಾಗಿದೆ. ಇದರಿಂದ ಈರುಳ್ಳಿ ಕೊಳೆಯುವ ಅಥವಾ ಒಣಗುವ ಸಾಧ್ಯತೆ ಕಡಿಮೆ ಇರುತ್ತದೆ’ ಎಂದರು.

ಸಿಗಲಿದೆ ಸಹಾಯಧನ
400 ಟನ್‌ ಈರುಳ್ಳಿ ಸಂಗ್ರಹಿಸಿ ಇಡಬಹುದಾದ ಘಟಕ ಖರೀದಿಸಲು ₹65 ಲಕ್ಷದಿಂದ ₹70 ಲಕ್ಷ ಬೇಕಾಗುತ್ತದೆ. ಈರುಳ್ಳಿ ಬೆಳೆಗಾರರು ವೈಯಕ್ತಿಕವಾಗಿ ಇದನ್ನು ಖರೀದಿಸುವುದು ಕಷ್ಟವಾಗಬಹುದು. ಆದ್ದರಿಂದ, ರೈತ ಉತ್ಪಾದಕ ಸಂಘಟನೆಗಳನ್ನು (ಎಫ್‌ಪಿಒ) ಗಮನದಲ್ಲಿರಿಸಿಕೊಂಡು ಟಾಟಾ ಸ್ಟೀಲ್‌ ಈ ಘಟಕವನ್ನು ಅಭಿವೃದ್ಧಿಪಡಿಸಿದೆ.

10 ರೈತರು ಒಗ್ಗೂಡಿ ಈ ಘಟಕವನ್ನು ಖರೀದಿಸಿದರೆ ಅನುಕೂಲವಾಗುತ್ತದೆ. ಸರ್ಕಾರದಿಂದ ಈ ಘಟಕ ಖರೀದಿಗೆ ಶೇ 50ರಷ್ಟು ಸಹಾಯಧನ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.