ADVERTISEMENT

ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೃತ್ಯ: ಐವರು ಆರೋಪಿಗಳ ಬಂಧನ

ಸರ್ಕಾರ, ಟೆಲಿಕಾಂ ಕಂಪನಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 20:42 IST
Last Updated 14 ಸೆಪ್ಟೆಂಬರ್ 2022, 20:42 IST
   

ಬೆಂಗಳೂರು: ಅಂತರರಾಷ್ಟ್ರೀಯ ಮೊಬೈಲ್‌ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಕೇರಳದ ಐವರು ಆರೋಪಿಗಳನ್ನು ನಗರದ ಸಿಸಿಬಿ ಹಾಗೂ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬುಧವಾರ ಬಂಧಿಸಿದ್ದಾರೆ.

ಕೇರಳದ ದಿನೇಶ್‌ ಪಾವೂರ್‌, ಕೆ.ಪಿ.ವಿಪಿನ್‌, ಸುಭಾಷ್‌, ಬೆಜಿನ್‌ ಜೋಸೆಫ್‌, ಷಮದ್‌ ಷಹಜನ್‌ ಬಂಧಿತರು.

ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯ ಮಾಹಿತಿ ಆಧರಿಸಿ ನಗರದ ಕೋರಮಂಗಲ, ಮೈಕೋ ಲೇಔಟ್‌ ಹಾಗೂ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ವರ್‌, ಗೇಟ್‌ ವೇ, ಕಂಪ್ಯೂಟರ್‌ ಸೇರಿ ಆರೋಪಿಗಳು ಬಳಸುತ್ತಿದ್ದ ವಿವಿಧ ಪರಿಕರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ADVERTISEMENT

‘ಐವರು ಆರೋಪಿಗಳು ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುವ ಕೃತ್ಯ ಎಸಗುತ್ತಿದ್ದರು. ಟೆಲಿಕಾಂ ಕಂಪನಿ ಹಾಗೂ ಸರ್ಕಾರಕ್ಕೆ ಅಪಾರ ನಷ್ಟ ಉಂಟು ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಕೋರಮಂಗಲದ ಬಿಜ್‌ಹಬ್‌ ಸಲ್ಯೂಷನ್‌ ಸಂಸ್ಥೆಯಿಂದ 1,500 ಸಿಪ್‌ ಪೋರ್ಟಲ್‌ ಸಂಪರ್ಕ ಪಡೆದು 40 ದಿನಗಳಲ್ಲಿ 68 ಲಕ್ಷ ನಿಮಿಷಗಳ ಹಾಗೂ ಮೈಕ್ರೋ ಲೇಔಟ್‌ನ ಆರ್ಚುರೆ ಸಂಸ್ಥೆಯಲ್ಲಿ 900 ಸಿಪ್‌ ಪೋರ್ಟಲ್‌ ಸಂಪರ್ಕ ಪಡೆದು 6 ದಿನಗಳಲ್ಲಿ ಒಟ್ಟು 24 ಲಕ್ಷ ನಿಮಿಷಗಳ ಅಕ್ರಮ ಕರೆ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಕಲಿ ದಾಖಲೆ ಸೃಷ್ಟಿಸಿ ಸಿಪ್‌ ಪೋರ್ಟ್‌ಗಳಿರುವ ಸ್ಥಿರ ದೂರವಾಣಿಯನ್ನು ಪಡೆದುಕೊಂಡು ಅನಧಿಕೃತವಾಗಿ ಟೆಲಿಫೋನ್‌ ಎಕ್ಸ್‌ಚೇಂಜ್‌ ರೀತಿಯಲ್ಲಿ ಕರೆಗಳನ್ನು ಸ್ಥಳೀಯ ಜಿಎಸ್‌ಎಂ ಕರೆಗಳಾಗಿ ಬದಲಾಯಿಸಿ ದೂರ ಸಂಪರ್ಕ ಇಲಾಖೆಗೆ ವಂಚನೆ ಎಸಗುತ್ತಿದ್ದರು. ಆರೋಪಿಗಳು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದರು’ ಎಂದು ತಿಳಿಸಿದರು.

‘ಆರೋಪಿಗಳು ಬಳಸುತ್ತಿದ್ದ ಪರಿಕರವು ಒಂದು ನಿಮಿಷಕ್ಕೆ ಲಕ್ಷಾಂತರ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿತ್ತು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.