ADVERTISEMENT

ಐಜಿಐಸಿಎಚ್: ಕೋವಿಡೇತರ ಚಿಕಿತ್ಸೆ ಲಭ್ಯ

ಕೋವಿಡ್ ಆಸ್ಪತ್ರೆಯೆಂದು ಘೋಷಿಸಿದ್ದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 16:34 IST
Last Updated 11 ಜನವರಿ 2022, 16:34 IST
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ   

ಬೆಂಗಳೂರು: ಕೋವಿಡ್ ಆಸ್ಪತ್ರೆಯೆಂದು ಗುರುತಿಸಲ್ಪಟ್ಟಿರುವ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಐಜಿಐಸಿಎಚ್) ಕೋವಿಡೇತರ ರೋಗಗಳಿಗೂ ಎಲ್ಲ ಚಿಕಿತ್ಸೆಗಳು ಈ ಮೊದಲಿನಂತೆ ದೊರೆಯಲಿವೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದಐಜಿಐಸಿಎಚ್ ಸಂಸ್ಥೆಯನ್ನು ಸರ್ಕಾರ ಕೋವಿಡ್ ಆಸ್ಪತ್ರೆಯೆಂದು ಘೋಷಿಸಿ, ಆದೇಶ ಹೊರಡಿಸಿತ್ತು. ಇದರಿಂದ ಅಲ್ಲಿ ಕೋವಿಡೇತರ ಚಿಕಿತ್ಸೆಗಳ ಲಭ್ಯತೆ ಬಗ್ಗೆ ಜನರಿಗೆ ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಸಂಸ್ಥೆಯು ಸ್ಪಷ್ಟನೆ ನೀಡಿದ್ದು, ‘ಕೋವಿಡ್ ಚಿಕಿತ್ಸೆಗೆ 90 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ. ಕೋವಿಡೇತರ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ’ ಎಂದು ತಿಳಿಸಿದೆ.

ಸಂಸ್ಥೆಯಲ್ಲಿ 430 ಹಾಸಿಗೆಗಳಿದ್ದು, 340 ಹಾಸಿಗೆಗಳು ಕೋವಿಡೇತರ ಚಿಕಿತ್ಸೆಗೆ ಸದ್ಯ ಲಭ್ಯ ಇವೆ. ಕೋವಿಡ್ ಚಿಕಿತ್ಸೆಗೆ ಗುರುತಿಸಲಾದ ಹಾಸಿಗೆಗಳಲ್ಲಿ 40 ಹಾಸಿಗೆಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿವೆ. ಅಲ್ಲಿ 10 ಕೋವಿಡ್ ಪೀಡಿತ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಸ್ವರೂಪದಲ್ಲಿ ಅಸ್ವಸ್ಥರಾದ ಮಕ್ಕಳನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗುತ್ತದೆ. ಕೆ.ಸಿ. ಜನರಲ್, ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿಯೂ ಮಕ್ಕಳನ್ನು ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಲಾಗುತ್ತಿದೆ.

ADVERTISEMENT

‘ಸಂಸ್ಥೆಯನ್ನು ಕೋವಿಡ್ ಆಸ್ಪತ್ರೆಯೆಂದು ಸರ್ಕಾರ ಘೋಷಿಸಿದ ಬಳಿಕ ಕೆಲವರಿಗೆ ಗೊಂದಲ ಉಂಟಾಗಿತ್ತು. ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ಹಾಸಿಗೆಗಳನ್ನು ಗುರುತಿಸಲಾಗಿದೆ. ಈಗಾಗಲೇ 10 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು ಹಾಗೂ 10 ಎನ್‌ಐಸಿಯು ಹಾಸಿಗೆ ಲಭ್ಯ ಇವೆ. 60 ಎಚ್‌ಡಿಯು ಹಾಸಿಗೆಗಳು ಇವೆ’ ಎಂದುಐಜಿಐಸಿಎಚ್ ನಿರ್ದೇಶಕ ಡಾ.ಸಂಜಯ್ ಕೆ.ಎಸ್ ತಿಳಿಸಿದರು.

‘ಕೋವಿಡೇತರ ಚಿಕಿತ್ಸೆಯನ್ನು ಈ ಮೊದಲಿನಂತೆ ಒದಗಿಸಲಾಗುವುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಮುಂದೂಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.