ADVERTISEMENT

ರಾಜ್ಯದಲ್ಲಿ ಡೆಂಗಿ ಜತೆಗೆ ಕಾಡುತ್ತಿವೆ ಸೋಂಕು ರೋಗಗಳು

ಮುಂಗಾರು ಮಳೆಯ ಬೆನ್ನಲ್ಲಿಯೇ ಜ್ವರ ಸಂಬಂಧಿ ಪ್ರಕರಣಗಳ ಸಂಖ್ಯೆ ಹೆಚ್ಚಳ

ವರುಣ ಹೆಗಡೆ
Published 20 ಜುಲೈ 2024, 21:47 IST
Last Updated 20 ಜುಲೈ 2024, 21:47 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರ ಜತೆಯಲ್ಲೇ ವಿವಿಧ ಸೋಂಕು ರೋಗಗಳೂ ಜನರನ್ನು ಕಾಡುತ್ತಿವೆ. ಮುಂಗಾರು ಮಳೆ ಆರಂಭವಾದ ಬಳಿಕ ವೈರಾಣು ಜ್ವರ ಸೇರಿದಂತೆ ಸೋಂಕು ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿದೆ. 

ಬಿಸಿಲು–ಮಳೆಯ ವಾತಾವರಣದಿಂದ ಹೆಚ್ಚಿನವರು ಶೀತ–ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗೆ ಒಳಗಾಗಿ, ಆಸ್ಪತ್ರೆಗಳಿಗೆ ಬರಲಾರಂಭಿಸಿದ್ದಾರೆ. ರೋಗದ ಲಕ್ಷಣಗಳನ್ನು ಆಧರಿಸಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಒಂದು ತಿಂಗಳಿಂದ ಡೆಂಗಿ ಜತೆಗೆ ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ಹಾಗೂ ಅತಿಸಾರ ಪ್ರಕರಣಗಳು ಏರುಗತಿಯಲ್ಲಿವೆ. ಇನ್ನೊಂದೆಡೆ ಮಲೇರಿಯಾ ಸೇರಿ ವಿವಿಧ ರೋಗಗಳ ಶಂಕೆ ಕಾರಣ ಪರೀಕ್ಷೆಗೆ ಒಳಪಡುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ADVERTISEMENT

ರಾಜ್ಯದಲ್ಲಿ ಸದ್ಯ ಮಲೇರಿಯಾ ನಿಯಂತ್ರಣದಲ್ಲಿದೆ. ಆದರೆ, ಜ್ವರ ಪೀಡಿತರಲ್ಲಿ ಈ ರೋಗ ಇರಬಹುದೆಂದು ಶಂಕಿಸಲಾಗಿದೆ. ಜೂನ್ ತಿಂಗಳಲ್ಲಿಯೇ ಮಲೇರಿಯಾ ಪತ್ತೆಗಾಗಿ 12.04 ಲಕ್ಷ ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ವರ್ಷ ಒಟ್ಟು 57.51 ಲಕ್ಷ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. 2018ರಲ್ಲಿ ರಾಜ್ಯದಲ್ಲಿ 5,289 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ 249 ಮಂದಿಯಲ್ಲಿ ಈ ರೋಗ ದೃಢಪಟ್ಟಿತ್ತು. 

ಲಕ್ಷದತ್ತ ಅತಿಸಾರ: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಮಾರ್ಚ್‌ ತಿಂಗಳಿಂದ ಏರಿಕೆಯ ಹಾದಿಯಲ್ಲಿವೆ. ಕಳೆದೊಂದು ತಿಂಗಳಿಂದ ಪ್ರತಿವಾರ ಸರಾಸರಿ ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ಲಕ್ಷದ ಗಡಿಗೆ ಬಂದಿದೆ.  ಲೆಪ್ಟೊಸ್ಪಿರೋಸಿಸ್ ಸೋಂಕು ರೋಗವೂ ಜೂನ್ ತಿಂಗಳಲ್ಲಿ ಹೆಚ್ಚಳವಾಗಿದ್ದು, ಕೊನೆಯ ವಾರದಲ್ಲಿ 78 ಮಂದಿಯಲ್ಲಿ ಈ ರೋಗ ದೃಢಪಟ್ಟಿದೆ. ಈವರೆಗೆ 4 ಸಾವಿರಕ್ಕೂ ಅಧಿಕ ಮಂದಿಗೆ ಈ ರೋಗ ಪತ್ತೆ ಸಂಬಂಧ ಪರೀಕ್ಷೆ ನಡೆಸಲಾಗಿದೆ.

ಈ ವರ್ಷದ ಆರಂಭದಲ್ಲಿ ಹೆಚ್ಚಿನ ಜನರು ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಸಮಸ್ಯೆಗೆ ಒಳಗಾಗಿದ್ದರು. ಜನವರಿ ತಿಂಗಳಲ್ಲಿ ಪ್ರತಿ ವಾರ ದೃಢಪಡುತ್ತಿದ್ದ ಪ್ರಕರಣಗಳ ಸಂಖ್ಯೆ 500ರ ಆಸುಪಾಸಿನಲ್ಲಿತ್ತು. ಈಗ ಆ ಸಂಖ್ಯೆ ನೂರರ ಗಡಿಯೊಳಗಿದೆ. ಮಾರ್ಚ್ ಬಳಿಕ ಏರಿಕೆ ಪಡೆದಿದ್ದ ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ), ಮೇ ಬಳಿಕ ಇಳಿಕೆ ಕಂಡಿದೆ. ಈ ಸಮಸ್ಯೆ ಪತ್ತೆ ಸಂಬಂಧ ಈವರೆಗೆ 3,676 ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಜ್ವರ ಪೀಡಿತರಿಗೆ ರೋಗ ಪತ್ತೆಗೆ ಪರೀಕ್ಷೆ ನಡೆಸಲಾಗುತ್ತಿದೆ. ವೈರಾಣು ಜ್ವರ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಸಂಬಂಧ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ
–ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತ

ನಾಯಿ, ಹಾವು ಕಡಿತ

ರಾಜ್ಯದಲ್ಲಿ ನಾಯಿ ಹಾಗೂ ಹಾವು ಕಡಿತ ಸಂಬಂಧ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಈ ವರ್ಷ 1.81 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಕಳೆದ ವರ್ಷ 2.32 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ನಾಲ್ವರು ಮೃತಪಟ್ಟಿದ್ದರು.

ಹಾವು ಕಡಿತ ಪ್ರಕರಣಗಳು ಈ ವರ್ಷ ಹೆಚ್ಚಿದ್ದು, ಈಗಾಗಲೇ 5,918 ಮಂದಿ ಹಾವು ಕಡಿತದಿಂದ ಬಳಲಿದ್ದಾರೆ. 39 ಮಂದಿ
ಮೃತಪಟ್ಟಿದ್ದಾರೆ. ಕಳೆದ ವರ್ಷ 6,595 ಮಂದಿ ಹಾವು ಕಡಿತಕ್ಕೆ ಒಳಗಾಗಿ, 19 ಮಂದಿ ಸಾವಿಗೀಡಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.