ಬೆಂಗಳೂರು: ‘ರಾಜ್ಯಕ್ಕೆ ₹11,495 ಕೋಟಿ ಅನುದಾನ ಬಿಡುಗಡೆ ಮಾಡುವಂತೆ 15ನೇ ಹಣಕಾಸು ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸುವ ಮೂಲಕ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ’ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜ್ಯದ ತೆರಿಗೆ ಹಂಚಿಕೆ ವಿಚಾರದಲ್ಲಿ ಅನವಶ್ಯಕವಾಗಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ತೊಂದರೆ ಆಗಿದ್ದರಿಂದ, ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂಬ ನಿರ್ಮಲಾ ಅವರ ಆರೋಪ ಶುದ್ಧ ಸುಳ್ಳು’ ಎಂದು ತಿಳಿಸಿದರು.
‘2020–21ರಲ್ಲಿ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ₹5,495 ಕೋಟಿ ವಿಶೇಷ ಅನುದಾನ ನಿಗದಿ ಮಾಡಿತ್ತು. ಆದರೆ, ಇದುವರೆಗೂ ಆ ಹಣ ನೀಡಲೇ ಇಲ್ಲ. ನಮಗೆ ಬರಬೇಕಾಗಿರುವ ಬಾಕಿಯ ಬಗ್ಗೆ ಮನವರಿಕೆ ಮಾಡಲು ಸಾಧ್ಯವಾಗದ ಕಾರಣ ನಿರ್ಮಲಾ ಆವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.
‘2021–26ರ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ವರದಿಯಲ್ಲಿ ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ ₹3 ಸಾವಿರ ಕೋಟಿ ಹಾಗೂ ಬೆಂಗಳೂರಿನ ಕೆರೆಗಳು ಸೇರಿದಂತೆ ವಿವಿಧ ಜಲಮೂಲಗಳ ಅಭಿವೃದ್ಧಿಗೆ ₹3 ಸಾವಿರ ಕೋಟಿ ಸೇರಿದಂತೆ ಒಟ್ಟು ₹6 ಸಾವಿರ ಕೋಟಿ ರಾಜ್ಯ ನಿರ್ದಿಷ್ಟ ಅನುದಾನ ರಾಜ್ಯಕ್ಕೆ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ಇದುವರೆಗೂ ಬಿಡುಗಡೆ ಆಗಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.