ADVERTISEMENT

ಬಿಬಿಎಂಪಿ ಮುಖ್ಯ ಆಯುಕ್ತರಿಂದ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:29 IST
Last Updated 13 ಜೂನ್ 2024, 19:29 IST
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಪರಿಶೀಲಿಸಿದರು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಪರಿಶೀಲಿಸಿದರು   

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್) ವತಿಯಿಂದ ಬಿಡದಿಯಲ್ಲಿ ಸ್ಥಾಪಿಸುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಪರೀಕ್ಷಾರ್ಥವಾಗಿ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಯನ್ನು ಶೀಘ್ರವೇ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಗುರುವಾರ ಭೇಟಿ ನೀಡಿದ್ದ ಮುಖ್ಯ ಆಯುಕ್ತರು, ಪರಿಶೀಲನೆ ನಡೆಸಿದರು. ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಈ ಘಟಕವನ್ನು 10 ಎಕರೆಯಲ್ಲಿ ಸ್ಥಾಪಿಸಲಾಗಿದ್ದು, ಒಟ್ಟು ₹260 ಕೋಟಿ ವೆಚ್ಚಾಗುತ್ತಿದೆ. ಪ್ರತಿನಿತ್ಯ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಪಾಲಿಕೆಯ ಸಂಸ್ಕರಣಾ ಘಟಕಗಳು, ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಲ್ಲಿ ಸಂಗ್ರಹವಾಗುವ ಆರ್‌ಡಿಎಫ್ ಅನ್ನು ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ರವಾನಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ನಿರ್ವಹಣೆ ಪರಿಶೀಲನೆ: ಬೊಮ್ಮನಹಳ್ಳಿ ವಲಯ ಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ಸರ್ವೆ ನಂ.39ರಲ್ಲಿ ಲೋಕೋಪಯೋಗಿ ಇಲಾಖೆ ಒಡೆತನದ ಸುಮಾರು 170 ಎಕರೆ ಜಾಗವಿದೆ. ಅಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ್ ಕಬಾಡೆ, ಲೋಕೇಶ್, ಕಾರ್ಯಪಾಲಕ ಎಂಜಿನಿಯರ್‌ ಮಧುಸುಧನ್, ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್‌ ಎಸ್.ಆರ್. ಕಬಾಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.