ಬೆಂಗಳೂರು: ಕಳ್ಳತನ ಬಗ್ಗೆ ಸುಳ್ಳು ಪ್ರಕರಣ ಸೃಷ್ಟಿಸಿ ₹ 75 ಲಕ್ಷ ದೋಚಲು ಸಂಚು ರೂಪಿಸಿದ್ದ ಹಾಗೂ ₹ 20 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪ ಎದುರಿಸುತ್ತಿರುವ ಬಿಡದಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಕೆ. ಶಂಕರ್ ನಾಯಕ್ ವಿರುದ್ಧ ಮತ್ತೆರಡು ದೂರುಗಳು ಸಲ್ಲಿಕೆಯಾಗಿರುವುದು ಗೊತ್ತಾಗಿದೆ.
ಬ್ಯಾಟರಾಯನಪುರ ನಿವಾಸಿ ಸಂಧ್ಯಾ ರಮೇಶ್ ಹಾಗೂ ಕೆ.ಆರ್.ಪುರ- ಟಿ.ಸಿ.ಪಾಳ್ಯದ ವಸಂತಾ ಅವರು ಶಂಕರ್ ನಾಯಕ್ ವಿರುದ್ಧ ಪ್ರತ್ಯೇಕ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ಅಂದಿನ ಕೆಂಗೇರಿ ಗೇಟ್ ಎಸಿಪಿ, ‘ಶಂಕರ್ ನಾಯಕ್ ಮೇಲಿನ ಆರೋಪಗಳು ಸಾಬೀತಾಗಿವೆ. ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಏಪ್ರಿಲ್‌ನಲ್ಲಿ ಡಿಸಿಪಿ ಅವರಿಗೆ ವರದಿ ಸಲ್ಲಿಸಿದ್ದರು.
ಅದೇ ವರದಿಯನ್ನು ಕಮಿಷನರ್ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ–ಐಜಿಪಿ) ಕಚೇರಿಗೆ ಕಳುಹಿಸಲಾಗಿತ್ತು. ಶಂಕರ್ ನಾಯಕ್ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ವರದಿಯಲ್ಲಿ ಪುರಾವೆಗಳನ್ನು ಎಸಿಪಿ ಅವರು ಲಗತ್ತಿಸಿದ್ದರು. ವರದಿ ಆಧರಿಸಿ ಡಿಜಿ–ಐಜಿಪಿ ಕಚೇರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ವರದಿಯನ್ನು ಮುಚ್ಚಿಟ್ಟು ಶಂಕರ್ ನಾಯಕ್ ಅವರು ಬಿಡದಿ ಠಾಣೆಗೆ ವರ್ಗಾವಣೆ ಆಗಲು ಅನುಕೂಲ ಮಾಡಿಕೊಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
₹ 75 ಲಕ್ಷ ದೋಚಲು ಸಂಚು ರೂಪಿಸಿದ್ದ ಹಾಗೂ ₹ 20 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಶಂಕರ್ ನಾಯಕ್ ವಿರುದ್ಧ ಈಗಾಗಲೇ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ಸಂಧ್ಯಾ ರಮೇಶ್ ಹಾಗೂ ವಸಂತಾ ನೀಡಿದ್ದ ದೂರಿನ ತನಿಖೆಯನ್ನೂ ನಡೆಸುವಂತೆ ದೂರುದಾರರ ಕಡೆಯವರು ಸಿಸಿಬಿಯನ್ನು ಒತ್ತಾಯಿಸಿದ್ದಾರೆ.
ಮಗನ ಅಕ್ರಮ ಬಂಧನ
‘ಮಗ ಸುಮಿತ್ ಅವರನ್ನು ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಅವರು ಅಕ್ರಮವಾಗಿ ಬಂಧಿಸಿ 2022ರ ಆಗಸ್ಟ್ 19ರಿಂದ 25ರವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಮನೆಯಲ್ಲಿದ್ದ ಕಂಪ್ಯೂಟರ್, ಲ್ಯಾಪ್‌ಟಾಪ್ ಹಗೂ ಪೆನ್‌ಡ್ರೈವ್ ಅಕ್ರಮವಾಗಿ ಜಪ್ತಿ ಮಾಡಿದ್ದರು. ಮಗನನ್ನು ಬಿಟ್ಟು ಕಳುಹಿಸಿದ ನಂತರ, ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಪೆನ್‌ಡ್ರೈವ್ ವಾಪಸು ಕೊಟ್ಟಿಲ್ಲ’ ಎಂದು ಸಂಧ್ಯಾ ರಮೇಶ್ ಅವರು ಫೆಬ್ರುವರಿ 1ರಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಿದ್ದರು.
₹ 8.85 ಲಕ್ಷ ನೀಡದ ಇನ್‌ಸ್ಪೆಕ್ಟರ್: ‘ಹಣ ದೋಚಿದ್ದ ಸಂಬಂಧ ಬ್ಯಾಟರಾಯನಪುರ ಠಾಣೆಗೆ 2022ರಲ್ಲಿ ದೂರು ನೀಡಿದ್ದೆ. ಆರೋಪಿಗಳನ್ನು ಬಂಧಿಸಿದ್ದ ಇನ್‌ಸ್ಪೆಕ್ಟರ್ ಶಂಕರ್ ನಾಯಕ್, ₹ 8.85 ಲಕ್ಷ ಜಪ್ತಿ ಮಾಡಿದ್ದರು. ಈ ಹಣ ಬಿಡುಗಡೆ ಮಾಡುವಂತೆ ತನಿಖಾಧಿಕಾರಿಗೆ ಆದೇಶಿಸಿತ್ತು. ಆದರೆ, ಶಂಕರ್ ನಾಯಕ್ ಹಣ ನೀಡಿಲ್ಲ’ ಎಂದು ವಸಂತಾ ಅವರು ಡಿಸಿಪಿ ಅವರಿಗೆ ಜ.27ರಂದು ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು.
‘ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿದ್ದ ಇನ್‌ಸ್ಪೆಕ್ಟರ್, ಬಿಳಿ ಹಾಳೆ ಮೇಲೆ ಸಹಿ ಮಾಡುವಂತೆ ಪೀಡಿಸಿದ್ದರು. ಅದನ್ನು ಒಪ್ಪದಿದ್ದಾಗ, ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದರು’ ಎಂದು ಅವರು ಹೇಳಿದ್ದರು.
₹ 20 ಲಕ್ಷ ಪ್ರಕರಣ
ಎರಡು ದೂರಿನ ತನಿಖೆ ನಡೆಸುವಾಗ, ಮತ್ತೊಂದು ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಅವರು ₹ 20 ಲಕ್ಷವನ್ನು ಖಜಾನೆಗೆ ನೀಡಿಲ್ಲವೆಂಬುದು ಎಸಿಪಿ ತನಿಖೆಯಿಂದ ಗೊತ್ತಾಗಿತ್ತು. ಈ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.