ADVERTISEMENT

ಪಿ.ಜಿಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಬಿ.ದಯಾನಂದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:53 IST
Last Updated 1 ಆಗಸ್ಟ್ 2024, 15:53 IST
ಬಿ.ದಯಾನಂದ 
ಬಿ.ದಯಾನಂದ    

ಬೆಂಗಳೂರು: ನಗರದಲ್ಲಿರುವ ಪೇಯಿಂಗ್‌ ಗೆಸ್ಟ್‌ಗಳಲ್ಲಿ(ಪಿ.ಜಿ) ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಸೂಚಿಸಿದ್ದಾರೆ.

ಕೋರಮಂಗಲದ ವಿ.ಆರ್‌.ಬಡಾವಣೆಯ ಭಾರ್ಗವಿ ಪಿ.ಜಿಗೆ ಆರೋಪಿಯೊಬ್ಬ ನುಗ್ಗಿ ಯುವತಿಯ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಎಚ್ಚೆತ್ತಿರುವ ನಗರ ಪೊಲೀಸರು, 13 ಅಂಶಗಳ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಅನಧಿಕೃತ ಪಿ.ಜಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಪೊಲೀಸ್‌ ಕಮಿಷನರ್‌ ಸೂಚನೆ ಮೇರೆಗೆ ಆಯಾ ವ್ಯಾಪ್ತಿಯ ಪಿ.ಜಿಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡುತ್ತಿದ್ದಾರೆ. ಮಾರ್ಗಸೂಚಿ ಪಾಲಿಸದಿದ್ದರೆ ಪಿ.ಜಿ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.  

ADVERTISEMENT

ಪಿ.ಜಿಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಅಪರಿಚಿತರಿಗೆ ಪ್ರವೇಶ ನೀಡಬಾರದು. ಪಿ.ಜಿಯಲ್ಲಿ ನೆಲೆಸಿರುವವರ ಮಾಹಿತಿ ಸಂಗ್ರಹಿಸಬೇಕು. ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಹೊಸದಾಗಿ ಜಾರಿಗೆ ತಂದಿರುವ ತಂತ್ರಾಂಶದಲ್ಲಿ ಎಲ್ಲ ಮಾಹಿತಿ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪಿ.ಜಿ ನಿವಾಸಿಗಳ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಆಹಾರದ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.

ತಮ್ಮ ವ್ಯಾಪ್ತಿಯ ಪಿಜಿಗಳಿಗೆ ಪೊಲೀಸರು ಭೇಟಿ ನೀಡಿ, ಪರವಾನಗಿ ಪರಿಶೀಲಿಸಬೇಕು. ಪ್ರತಿ ತಿಂಗಳು ತಮ್ಮ ವ್ಯಾಪ್ತಿಯಲ್ಲಿರುವ ಪಿ.ಜಿಗಳಿಗೆ ಭೇಟಿ ಕಡ್ಡಾಯ. ಅನಧಿಕೃತವೆಂದು ಕಂಡುಬಂದರೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಕ್ರಮ, ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಮಾಹಿತಿ ಕಲೆ ಹಾಕಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.