ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಪೂರ್ಣ ಕಾಮಗಾರಿಗಳ ವರದಿ ಸಿದ್ದಪಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ‘ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ವಲಯದ ಎಲ್ಲ ಪ್ರಮಖ ರಸ್ತೆಗಳಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿರುವ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಆಟದ ಮೈದಾನಗಳು, ಕೆರೆಗಳು ಹಾಗೂ ಉದ್ಯಾನಗಳ ನಿರ್ವಹಣೆ ಮಾಡಬೇಕು. ಬೇಗೂರು ರಸ್ತೆ ವಿಸ್ತರಣೆಗೆ, ಆಸ್ತಿ ಮಾಲೀಕರ ಜೊತೆ ಸಭೆ ನಡೆಸಿ ಟಿಡಿಆರ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಮಡಿವಾಳ ಕೆರೆ ಭಾಗದಲ್ಲಿ ಪಾಲಿಕೆಯ 3 ಎಕರೆ ಜಾಗವಿದ್ದು, ಆ ಸ್ಥಳದಲ್ಲಿ 45 ಎಂಲ್‌ಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶ ಕಲ್ಪಿಸಿಕೊಡಲು ಜಲಮಂಡಳಿ ಅಧಿಕಾರಿಗಳು ಮನವಿಗೆ ಸ್ಪಂದಿಸಿ, ಪ್ರಸ್ತಾವ ಸಲ್ಲಿಸಲು ಸೂಚಿಸಿದರು.
ಪಾಲಿಕೆ ಜಾಗಗಳಿಗೆ ಬೇಲಿ ನಿರ್ಮಿಸಲು ₹50 ಕೋಟಿ ಅನುದಾನ ಮೀಸಲಿದೆ. ಪ್ರಸ್ತಾವ ಸಲ್ಲಿಸಿದರೆ ಬಿಡುಗಡೆ ಮಾಡಲಾಗುವುದು ಎಂದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ವಲಯ ಜಂಟಿ ಆಯುಕ್ತ ಅಜಿತ್, ಉಪ ಆಯುಕ್ತ ಡಿ.ಕೆ ಬಾಬು, ಮುಖ್ಯ ಎಂಜಿನಿಯರ್ ಶಶಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.