ADVERTISEMENT

ಕ್ಷುದ್ರಗ್ರಹಗಳಿಂದ ರಕ್ಷಣೆಗೆ ಸಂಶೋಧನೆ ಅಗತ್ಯ: ಎಸ್‌.ಸೋಮನಾಥ್

ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:58 IST
Last Updated 3 ಜುಲೈ 2024, 15:58 IST
<div class="paragraphs"><p>ಇಸ್ರೊ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಸ್ಥೆಯ ವೈಜ್ಞಾನಿಕ ಕಾರ್ಯದರ್ಶಿ ಶಂತನು ಭಟವಾಡೇಕರ್, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಮತ್ತು ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ನಿರ್ದೇಶಕ ಅನಿಲ್ ಭಾರಧ್ವಾಜ್‌ ಇದ್ದರು.</p></div>

ಇಸ್ರೊ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಸ್ಥೆಯ ವೈಜ್ಞಾನಿಕ ಕಾರ್ಯದರ್ಶಿ ಶಂತನು ಭಟವಾಡೇಕರ್, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಮತ್ತು ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ನಿರ್ದೇಶಕ ಅನಿಲ್ ಭಾರಧ್ವಾಜ್‌ ಇದ್ದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವಂತಹ ಅಪಾಯ ಮುಂದಿನ ನೂರು ವರ್ಷಗಳವರೆಗೆ ಇಲ್ಲ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಅವರು ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ ಅಂಗವಾಗಿ ಇಸ್ರೊ ಕೇಂದ್ರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಕ್ಷುದ್ರಗ್ರಹ ರಕ್ಷಣಾ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಸೌರಮಂಡಲದಲ್ಲಿ ಲಕ್ಷಾಂತರ ಕ್ಷುದ್ರಗ್ರಹಗಳು ಸುತ್ತುತ್ತಿವೆ. ಅವು ಭೂಮಿಯತ್ತ ಹೊರಟರಷ್ಟೇ ಅಪಾಯ. ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದ್ದ ಕಾರಣದಿಂದಲೇ ಡೈನಸಾರ್‌ಗಳು ವಿನಾಶವಾದವು’ ಎಂದು ಅವರು ವಿವರಿಸಿದರು.

‘ಇನ್ನು ಮುಂದಿನ 100 ವರ್ಷಗಳವರೆಗೆ ಅಂತಹ ಅಪಾಯ ಇಲ್ಲ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಆದರೆ ಅಂತಹ ಅಪಾಯ ಎದುರಾದರೆ ಮನುಷ್ಯ ಸಂತತಿಯೂ ಡೈನಸಾರ್‌ಗಳಂತೆ ವಿನಾಶವಾಗಬಹುದು. ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದನ್ನು ತಡೆಯುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಆ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಅವರು ವಿವರಿಸಿದರು.

ಭೂಮಿಯತ್ತ ನುಗ್ಗುತ್ತಿರುವ ಕ್ಷುದ್ರಗ್ರಹಗಳನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಜಪಾನ್‌ ಬಾಹ್ಯಾಕಾಶ ಸಂಶೋಧನಾ ಏಜೆನ್ಸಿಯು (ಜಾಕ್ಸಾ) ಕೈಗೊಂಡಿರುವ ‘ಹಯಾಬುಸಾ–2’ ಕಾರ್ಯಾಚರಣೆಯನ್ನು ಅವರು ಸಂಸ್ಥೆಯ ವಿಜ್ಞಾನಿ ಮಕೊಟ ಯೊಶಿಕಾವಾ ವಿವರಿಸಿದರು.

‘ಹಯಾಬುಸಾ–2 ನೌಕೆಯು ರ‍್ಯೂಗೂ ಎಂಬ ಕ್ಷುದ್ರಗ್ರಹದ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ಈಗಾಗಲೇ ಕಳುಹಿಸಿದ. ವಿಸ್ತರಿತ ಕಾರ್ಯಾಚರಣೆಯಲ್ಲಿ ಆ ನೌಕೆಯು 2026ರಲ್ಲಿ ‘2021 ಸಿಸಿ21’ ಎಂಬ ಕ್ಷುದ್ರಗ್ರಹಕ್ಕೆ ತೀರಾ ಸಮೀಪದಲ್ಲಿ ಹಾದುಹೋಗಲಿದೆ. ಭೂಮಿಯತ್ತ ನುಗ್ಗುತ್ತಿರುವ ಕ್ಷುದ್ರಗ್ರಹಗಳ ಕಕ್ಷೆಯ ದಿಕ್ಕನ್ನು ಬದಲಿಸಲು ಸಾಧ್ಯವೇ ಎಂಬುದನ್ನು ಆಗ ಪರಿಶೀಲಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಐರೋಪ್ಯ ದೇಶಗಳು ಜಪಾನ್‌ ಮತ್ತು ಅಮೆರಿಕ ಸಂಶೋಧನೆ ನಡೆಸುತ್ತಿವೆ. ಇಸ್ರೊ ಸಹ ಇದರ ಭಾಗಿಯಾಗಲು ಬಯಸುತ್ತದೆ
ಎಸ್‌.ಸೋಮನಾಥ್, ಇಸ್ರೊ ಅಧ್ಯಕ್ಷ

‘ಗಗನಯಾನ ನೌಕೆ ಸುರಕ್ಷಿತ’

‘ಗಗನಯಾನ ನೌಕೆ ಸುರಕ್ಷಿತವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಮಾನವರಹಿತ ಗಗನನೌಕೆಯನ್ನು ಉಡ್ಡಯನ ಮಾಡಲಾಗುತ್ತದೆ’ ಎಂದು ಎಸ್‌.ಸೋಮನಾಥ್ ಅವರು ಹೇಳಿದರು. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್‌ ಸುರಕ್ಷಿತವಾಗಿದ್ದಾರೆ. ಈ ಅವಘಡ ಮತ್ತು ರಕ್ಷಣಾ ಕಾರ್ಯಾಚರಣೆಯು ನಮಗೊಂದು ಪಾಠವಾಗಲಿದೆ. ಅದರಿಂದ ಕಲಿಯಲು ಸಾಕಷ್ಟಿದೆ’ ಎಂದು ಅವರು ಹೇಳಿದರು. ಚಂದ್ರಯಾನ–4 ಸೇರಿ ಹಲವು ಪ್ರಸ್ತಾವಗಳು ಇಸ್ರೊ ಮುಂದೆ ಇವೆ ಎಂದು ಅವರು ಮಾಹಿತಿ ನೀಡಿದರು.

ಒಂದು ಸುತ್ತು ಪೂರೈಸಿದ ಆದಿತ್ಯ–ಎಲ್‌1

ಇಸ್ರೊವಿನ ಆದಿತ್ಯ–ಎಲ್‌1 ನೌಕೆಯು ಲಗ್ರಾಂಜಿಯನ್‌ ಹ್ಯಾಲೊ ಕ್ಷಕೆಯಲ್ಲಿ ಒಂದು ಸುತ್ತು ಬಂದಿದೆ. ಇದೇ ಜನವರಿ 6ರಂದು ನೌಕೆಯನ್ನು ಲಗ್ರಾಂಜಿಯನ್‌ ಕಕ್ಷೆಗೆ ಸೇರಿಸಲಾಗಿತ್ತು. 178 ದಿನಗಳಲ್ಲಿ ನೌಕೆಯು ಕ್ಷಕೆಯಲ್ಲಿ ಒಂದು ಸುತ್ತು ಬಂದಿದೆ. ಈಗ ಎರಡನೇ ಸುತ್ತನ್ನು ಆರಂಭಿಸಿದೆ. 178 ದಿನಗಳ ಈ ಪಯಣದಲ್ಲಿ ನೌಕೆಯ ದಿಕ್ಕನ್ನು ಬದಲಿಸುವ ಎರಡು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ನೌಕೆಯು ಕಕ್ಷೆಯಿಂದ ಸ್ವಲ್ಪ ದೂರ ಸರಿದಿದ್ದ ಕಾರಣದಿಂದ ಫೆಬ್ರುವರಿ 22 ಮತ್ತು ಜೂನ್‌ 7ರಂದು ಕಾರ್ಯಾಚರಣೆ ನಡೆಸಲಾಗಿತ್ತು. ಬುಧವಾರ ಮತ್ತೊಮ್ಮೆ ಇಂತಹ ಕಾರ್ಯಾಚರಣೆ ನಡೆಸಿ ನೌಕೆಯು ಅದೇ ಕ್ಷಕೆಯಲ್ಲಿ ಮುಂದುವರಿಯುವಂತೆ ಮಾಡಲಾಗಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.