ADVERTISEMENT

ಬೆದರಿಸಿ ಸುಲಿಗೆ: ನಿರೂಪಕಿ ದಿವ್ಯಾ ವಸಂತಾ ಸೇರಿ ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:01 IST
Last Updated 6 ಜುಲೈ 2024, 16:01 IST
<div class="paragraphs"><p>ದಿವ್ಯಾ ವಸಂತಾ&nbsp;</p></div>

ದಿವ್ಯಾ ವಸಂತಾ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಇಂದಿರಾನಗರದ ಸ್ಪಾ ವ್ಯವಸ್ಥಾಪಕರಿಗೆ ಬೆದರಿಸಿ ₹15 ಲಕ್ಷ ಸುಲಿಗೆಗೆ ಪ್ರಯತ್ನಿಸಿದ್ದ ಆರೋಪದಡಿ ‘ರಾಜ್‌ ನ್ಯೂಸ್‌’ ಸುದ್ದಿವಾಹಿನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತಾ ಅವರ ಸಹೋದರ ಸಂದೇಶ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಮೂರು ಮೊಬೈಲ್‌ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ದಾಖಲಾದ ಮೇಲೆ ದಿವ್ಯಾ, ಸಚಿನ್‌, ಆಕಾಶ್‌ ತಲೆಮರೆಸಿಕೊಂಡಿದ್ದಾರೆ.

ಇಂದಿರಾನಗರದ 100 ಅಡಿ ರಸ್ತೆಯ 15ನೇ ಮುಖ್ಯರಸ್ತೆಯಲ್ಲಿರುವ ‘ಟ್ರೀ ಸ್ಪಾ ಆ್ಯಂಡ್‌ ಬ್ಯೂಟಿ ಪಾರ್ಲರ್‌’ನ ವ್ಯವಸ್ಥಾಪಕ ಶಿವಕುಮಾರ್ ಅವರು ಜುಲೈ 1ರಂದು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ತಾಂತ್ರಿಕ ಮಾಹಿತಿ ಹಾಗೂ ಕೆಲವು ಸಾಕ್ಷ್ಯ ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ವೆಂಕಟೇಶ್‌

ಏನಿದು ಪ್ರಕರಣ?:

‘ಬ್ಯೂಟಿ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿದೆ’ ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆಗೆ ವೆಂಕಟೇಶ್ ಹಾಗೂ ಸಹಚರರು ಪ್ರಯತ್ನಿಸಿದ್ದರು.

‘ವೆಂಕಟೇಶ್‌ ಹಾಗೂ ದಿವ್ಯಾ ತಂಡದವರು ಜೂನ್‌ 21ರಂದು ಇಂದಿರಾನಗರದ ‘ಟ್ರೀ ಸ್ಪಾ ಆ್ಯಂಡ್‌ ಬ್ಯೂಟಿ ಪಾರ್ಲರ್‌’ಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಬಳಿಕ, ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸಹೋದರ ಸಂದೇಶ್‌ ಬಂದಿದ್ದರು. ತಮ್ಮದೇ ತಂಡ ಕೆಲಸಕ್ಕೆ ಸೇರಿಸಿದ್ದ ಯುವತಿಯಿಂದ ಮಸಾಜ್‌ ಮಾಡಿಸಿಕೊಳ್ಳಲು ಬೇಡಿಕೆ ಸಲ್ಲಿಸಿದ್ದರು. ಅದಕ್ಕೆ ಒಪ್ಪಿದ್ದ ಸ್ಪಾ ಸಿಬ್ಬಂದಿ ಆಕೆಯನ್ನೇ ಕೊಠಡಿಗೆ ಕಳುಹಿಸಿದ್ದರು. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಸಲುಗೆಯಿಂದಿರುವ ದೃಶ್ಯಗಳನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದರು.

ಬಳಿಕ ಸುದ್ದಿವಾಹಿನಿಯ ವರದಿಗಾರ್ತಿಯನ್ನು ಸ್ಪಾಗೆ ಕಳುಹಿಸಿ ವೆಂಕಟೇಶ್‌ ಹಣ ಸುಲಿಗೆಗೆ ಯತ್ನಿಸಿದ್ದರು. ಸಂದೇಶ್‌ ಚಿತ್ರೀಕರಿಸಿಕೊಂಡಿದ್ದ ವಿಡಿಯೊವನ್ನು ಸ್ಪಾ ವ್ಯವಸ್ಥಾಪಕರಿಗೆ ಕಳುಹಿಸಿ ವೆಂಕಟೇಶ್ ಬೆದರಿಸಿದ್ದರು’ ಎಂದು ಪೊಲೀಸರು ಹೇಳಿದರು.

ದೊಡ್ಡ ಮೊತ್ತಕ್ಕೆ ಬೇಡಿಕೆ:

₹15 ಲಕ್ಷ ನೀಡಿದರೆ ವಿಡಿಯೊ ಡಿಲಿಟ್‌ ಮಾಡುವುದಾಗಿ ಆರೋಪಿಗಳು ಹೇಳಿದ್ದರು. ಬೆದರಿದ್ದ ಸ್ಪಾ ಸಿಬ್ಬಂದಿ, ‘ಅಷ್ಟು ಹಣವಿಲ್ಲ. ₹1 ಲಕ್ಷ ಮಾತ್ರವಿದೆ’ ಎಂದು ಹೇಳಿದ್ದರು. ಕೊನೆಗೆ ₹8 ಲಕ್ಷ ನೀಡುವಂತೆ ಪಟ್ಟು ಹಿಡಿದಿದ್ದರು. ಅದಾದ ಮೇಲೆ ವ್ಯವಸ್ಥಾಪಕರು ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ಗ್ರೂಪ್‌ ರಚನೆ

‘ಆರೋಪಿಗಳಾದ ದಿವ್ಯಾ ಹಾಗೂ ವೆಂಕಟೇಶ್ ಅವರು ತಮ್ಮ ವಾಟ್ಸ್ಆ್ಯಪ್‌ನಲ್ಲಿ ಸುಲಿಗೆ ಕೃತ್ಯ ನಡೆಸಲು ‘ಸ್ಪೈ ರಿಸರ್ಚ್‌ ಟೀಂ’ ಹೆಸರಿನಲ್ಲಿ ಗ್ರೂಪ್‌ ಮಾಡಿಕೊಂಡಿದ್ದರು. ಮುಂದಿನ ಕಾರ್ಯಾಚರಣೆ ಬಗ್ಗೆ ಇದೇ ಗ್ರೂಪ್‌ನಲ್ಲಿ ಚರ್ಚಿಸುತ್ತಿದ್ದರು’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸದ್ದು ಮಾಡಿದ್ದ ಖುಷಿ ಸುದ್ದಿ

‘ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಸಕ್ರಿಯವಾಗಿದ್ಧಾರೆ. ಸುದ್ದಿ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಣೆ ನಡೆಸುತ್ತಿದ್ದ ವೇಳೆ ರಾಜ್ಯಕ್ಕೆ ಖುಷಿ ಸುದ್ದಿ ಎಂದು ದಿವ್ಯಾ ಪ್ರಸ್ತಾಪಿಸಿದ್ದ ಮಾತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡಿತ್ತು’ ಎಂದು ಮೂಲಗಳು ಹೇಳಿವೆ.

‘ರಾಜ್‌ ನ್ಯೂಸ್‌ ಸುದ್ದಿ ವಾಹಿನಿ ಸೇರುವ ಮುನ್ನ ವೆಂಕಟೇಶ್ ಅವರು ತಮ್ಮದೇ ಯುಟ್ಯೂಬ್‌ ಚಾನಲ್‌ ನಡೆಸುತ್ತಿದ್ದರು. ಇದೇ ಚಾನಲ್‌ಗೆ ದಿವ್ಯಾ ಅವರು ಸಂದರ್ಶನಕ್ಕೆ ಬಂದಿದ್ದರು. ಆಗ ಇಬ್ಬರೂ ಪರಿಚಯವಾಗಿದ್ದರು. ಅದೇ ಸ್ನೇಹದ ಮೇಲೆ ಕೃತ್ಯಕ್ಕೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದರು.

ಸಂದೇಶ್ 

ಹಲವರಿಂದ ಹಣ ಸುಲಿಗೆ


‘ಇವರಿಬ್ಬರು ವೈದ್ಯರು ಸೇರಿ ಹಲವರ ಬಳಿಯಿಂದ ಹಣ ಸುಲಿಗೆ ಮಾಡಿದ್ದಾರೆ. ಆನ್‌ಲೈನ್‌ ಮೂಲಕ ಪೇಮೆಂಟ್‌ ಮಾಡಿಸಿಕೊಂಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ. ಲಗ್ಗೆರೆಯಲ್ಲಿ ದಿವ್ಯಾ ನೆಲೆಸಿದ್ದು ತಲೆಮರೆಸಿಕೊಂಡಿದ್ದಾರೆ. ಮನೆಯಿಂದ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ ಲ್ಯಾಪ್‌ಟಾಪ್‌ ಅನ್ನು ಆರೋಪಿ ತೆಗೆದುಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ಆಕಾಶ್‌ 

‘ವೆಂಕಟೇಶ್ ವಿರುದ್ಧ ಕ್ರಮ’

‘ಸುಲಿಗೆ ‍ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೂ ‘ರಾಜ್‌’ ನ್ಯೂಸ್‌ಗೂ ಸಂಬಂಧ ಇಲ್ಲ. ನಾವು ಯಾವುದೇ ಸಿಇಒ ಹುದ್ದೆಯನ್ನು ಸೃಷ್ಟಿಸಿಲ್ಲ. ರಾಜಾನುಕುಂಟೆ ವೆಂಕಟೇಶ್‌ ಎಂಬುವವರು ಮೂರು ತಿಂಗಳಿಂದ ನಮ್ಮ ಸಂಸ್ಥೆಯಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಸಂಸ್ಥೆಯ ಸಿಇಒ ಹಾಗೂ ಉದ್ಯೋಗಿ ಅಲ್ಲ. ಅವರು ಸಿಇಒ ಎಂದು ಹೇಳಿಕೊಂಡಿರುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಎಂದು ಶಿವಶ್ರೀ ಮೀಡಿಯಾ ಸಂಸ್ಥೆಯ (ರಾಜ್‌ ನ್ಯೂಸ್‌) ವ್ಯವಸ್ಥಾಪಕ ನಿರ್ದೇಶಕ ಶಿವರುದ್ರಪ್ಪ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.