ADVERTISEMENT

ಐಪಿಎಲ್ ಕ್ರಿಕೆಟ್: 32 ಮೊಬೈಲ್ ಕದ್ದಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮೇ 2024, 15:37 IST
Last Updated 28 ಮೇ 2024, 15:37 IST
ಸಿದ್ದಾಪುರ ಠಾಣೆ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ಮೊಬೈಲ್‌ಗಳು
ಸಿದ್ದಾಪುರ ಠಾಣೆ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ಮೊಬೈಲ್‌ಗಳು   

ಬೆಂಗಳೂರು: ಐಪಿಎಲ್ ಕ್ರಿಕೆಟ್ ಸಂದರ್ಭದಲ್ಲಿ ಜನಸಂದಣಿ ಇರುತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಹಾಗೂ ಇತರೆಡೆ ಜನರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ ಪಂಕಜ್ ಸಿಂಗ್‌ನನ್ನು (32) ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜಾರ್ಖಂಡ್‌ನ ಪಂಕಜ್ ಸಿಂಗ್, ಕಳ್ಳತನಕ್ಕೆಂದು ಸಹಚರರ ಜೊತೆ ನಗರಕ್ಕೆ ಬಂದಿದ್ದ. ಈತನಿಂದ ₹ 19.50 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈತನ ನಾಲ್ವರು ಸಹಚರರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸೋಮೇಶ್ವರನಗರದಲ್ಲಿರುವ ಅತಿಥಿ ಗೃಹವೊಂದರಲ್ಲಿ ಆರೋಪಿ ಉಳಿದುಕೊಂಡಿದ್ದ. ಅತಿಥಿಗೃಹದ ಮುಂದೆಯೇ ಮೇ 15ರಂದು ಸಾರ್ವಜನಿಕರನ್ನು ಮಾತನಾಡಿಸುತ್ತ, ಮೊಬೈಲ್‌ ಮಾರಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ. ಅತಿಥಿ ಗೃಹದ ಕೊಠಡಿಯಲ್ಲಿಯೇ ಆರೋಪಿ 32 ಮೊಬೈಲ್ ಸಂಗ್ರಹಿಸಿಟ್ಟುಕೊಂಡಿದ್ದ’ ಎಂದರು.

ADVERTISEMENT

‘ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯುವ ಕ್ರೀಡಾಂಗಣ ಎದುರು ಹಾಗೂ ಇತರೆಡೆ ಜನಸಂದಣಿ ಇರುವ ಸ್ಥಳಗಳನ್ನು ಆರೋಪಿಗಳು ಗುರುತಿಸಿದ್ದರು. ಅದೇ ಸ್ಥಳಕ್ಕೆ ಹೋಗುತ್ತಿದ್ದ ಆರೋಪಿಗಳು, ಜನರ ಬಳಿಯ ಮೊಬೈಲ್ ಕದ್ದುಕೊಂಡು ಪರಾರಿಯಾಗುತ್ತಿದ್ದರು. ಮೊಬೈಲ್‌ಗಳನ್ನು ನಗರದಲ್ಲೇ ಮಾರಾಟ ಮಾಡಿ, ಹಣ ಪಡೆದು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಮಹಿಳಾ ಕಾನ್‌ಸ್ಟೆಬಲ್ ಮೊಬೈಲ್ ಕಳವು: ‘ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೊಬೈಲ್ ಕಳ್ಳತನವಾಗಿತ್ತು. ಅವರು ದೂರು ನೀಡಿದ್ದರು. ಬಂಧಿತ ಆರೋಪಿ ಪಂಕಜ್‌ ಸಿಂಗ್ ಹಾಗೂ ಸಹಚರರು, ಮಹಿಳಾ ಕಾನ್‌ಸ್ಟೆಬಲ್‌ ಮೊಬೈಲ್‌ ಕದ್ದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.