ಬೆಂಗಳೂರು: ಕಾಮಗಾರಿ ಭ್ರಷ್ಟಾಚಾರದ ವಿಷಯದಲ್ಲಿ ಸದಾ ಸದ್ದು ಮಾಡುತ್ತಲೇ ಇರುವ ಬಿಬಿಎಂಪಿಯಲ್ಲಿ ‘ಸ್ವಚ್ಛ ಭಾರತ್ ಅಭಿಯಾನ’ದ ಹಣವನ್ನೂ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಪತ್ತೆಯಾಗಿದೆ. ಕೇಂದ್ರ ಸರ್ಕಾರ ಈ ಉದ್ದೇಶಕ್ಕೆ ನೀಡಿದ್ದ ₹108 ಕೋಟಿ ಅನುದಾನ ದುರುಪಯೋಗವಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಆರಂಭಿಸಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ– 2002ರಡಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ, ಆಂತರಿಕ ತನಿಖಾ ವರದಿಯನ್ನು ದಾಖಲೆ ಸಮೇತ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ಸಮಗ್ರ ಮಾಹಿತಿಯನ್ನು ತುರ್ತಾಗಿ ಒದಗಿಸುವಂತೆ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯದ ಉಪನಿರ್ದೇಶಕ ಮನಿ ಸಿಂಗ್ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ 2021ರ ಡಿಸೆಂಬರ್ 20ರಂದು ಪತ್ರ ಬರೆದಿದ್ದಾರೆ. ರಾಕೇಶ್ ಸಿಂಗ್ ಅವರು, ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಡಿಸೆಂಬರ್ 30ರಂದು ಪತ್ರ ಬರೆದು, ಅಗತ್ಯ ಮಾಹಿತಿಯನ್ನು ತುರ್ತಾಗಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಜತೆಗೆ, ಈ ಪ್ರಕರಣದ ಬಗ್ಗೆ ಅರಿವು ಇರುವ ಅಧಿಕಾರಿಯನ್ನು ನಿಯೋಜಿಸಿ, ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಇ.ಡಿ. ಪತ್ರದಲ್ಲಿ ಏನಿದೆ?: ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದ ಪ್ರಕರಣದಲ್ಲಿ ಪಾಲಿಕೆಯ ಅಧಿಕಾರಿಗಳು ಭಾಗಿಯಾಗಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಆಂತರಿಕ ತನಿಖೆಯ ವರದಿಯನ್ನು ದಾಖಲೆ ಸಮೇತ ಸಲ್ಲಿಸಬೇಕು. ಸ್ವಚ್ಛ ಭಾರತ ಅಭಿಯಾನದ ₹108 ಕೋಟಿ ಅನುದಾನ ಬಿಡುಗಡೆಯಾದ ವಿವಿಧ ಹಂತಗಳ ವಿವರಗಳನ್ನು ಮತ್ತು ವೆಚ್ಚದ ಮಾಹಿತಿಯನ್ನೂ ಒದಗಿಸಬೇಕು. ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದ ಅಧಿಕಾರಿಗಳ ಹೆಸರು, ಹುದ್ದೆ, ಈಗ ಕಾರ್ಯನಿರ್ವಹಿಸುತ್ತಿರುವ ಸ್ಥಳ, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯ ವಿವರಗಳನ್ನೂ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಸೂಚಿಸಿದೆ.
ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿ ಕೈಗೊಂಡ ಕಾಮಗಾರಿಗಳ ವಿವರ, ಕಾರ್ಯಾದೇಶ, ಮೊತ್ತ, ಗುತ್ತಿಗೆದಾರರ ಹೆಸರನ್ನು ಒದಗಿಸಬೇಕು. ಈ ಕಾಮಗಾರಿಗಳು ಪೂರ್ಣ ಆಗಿವೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಈ ದಾಖಲೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ತನಿಖೆಗೆ ಸಹಕಾರ ನೀಡಲು ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ಮನಿ ಸಿಂಗ್ ಅವರು ಪತ್ರದಲ್ಲಿ ಕೋರಿದ್ದರು.
2015–16ರಿಂದ 2017–18ರ ಅವಧಿಯಲ್ಲಿ ಸ್ವಚ್ಛ ಭಾರತ ಯೋಜನೆಗೆ ಬಿಡುಗಡೆಯಾದ ₹108 ಕೋಟಿಯಲ್ಲಿ ₹92 ಕೋಟಿಯನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಿ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಕೆಯಾಗಿತ್ತು. ಈ ಅನುದಾನವನ್ನು ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿಗೆ ಬಳಸಲಾಗಿದೆ. ಇದರಲ್ಲಿ ನಗರದ ಕೆಲವು ಜನಪ್ರತಿನಿಧಿಗಳು ಸಹ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆಂತರಿಕ ತನಿಖೆ ನಡೆಸಿತ್ತು. ಬಳಿಕ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿತ್ತು. ಈ ನಡುವೆ, ಜಾರಿ ನಿರ್ದೇಶನಾಲಯವೂ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.