ADVERTISEMENT

880 ಎಂಜಿನಿಯರ್‌ಗಳ ಬಡ್ತಿ ಪ್ರಕ್ರಿಯೆ ಆರಂಭ

ಪಿಡಬ್ಲ್ಯುಡಿಯಿಂದ ಮಾಹಿತಿ ಕೋರಿದ ಜಲಸಂಪನ್ಮೂಲ ಇಲಾಖೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 20:37 IST
Last Updated 26 ನವೆಂಬರ್ 2020, 20:37 IST

ಬೆಂಗಳೂರು: ಎಂಜಿನಿಯರುಗಳ ಇಲಾಖಾ ವಿಭಜನೆಯ ಬಳಿಕ ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬಂದಿರುವ 880 ಎಂಜಿನಿಯರ್‌ಗಳ ಬಡ್ತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಬಡ್ತಿಗೆ ಪೂರಕವಾಗಿ ಅಗತ್ಯವಿರುವ ಮಾಹಿತಿಯನ್ನು ಒದಗಿಸುವಂತೆ ಲೋಕೋಪಯೋಗಿ ಇಲಾಖೆಯನ್ನು ಕೋರಲಾಗಿದೆ.

ಲೋಕೋಪಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಗಳಲ್ಲಿರುವ ಎಲ್ಲ ಎಂಜಿನಿಯರ್‌ಗಳೂ ಲೋಕೋಪಯೋಗಿ ಇಲಾಖೆಯ ವೃಂದದಲ್ಲೇ ಇದ್ದರು. ಈಗ ಪ್ರತ್ಯೇಕವಾಗಿ ಇಲಾಖಾವಾರು ಎಂಜಿನಿಯರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆ ಬಳಿಕ ಜಲ ಸಂಪನ್ಮೂಲ ಇಲಾಖೆ ತನ್ನ ವ್ಯಾಪ್ತಿಯಲ್ಲಿ ನಿಯಮ 32ರ ಅಡಿಯಲ್ಲಿ ಪ್ರಭಾರದಲ್ಲಿರುವ ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಮುಂದಾಗಿದೆ.

ನವೆಂಬರ್‌ 20ರಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ಅವರಿಗೆ ಪತ್ರ ಬರೆದಿರುವ ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, 53 ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು, 131 ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, 489 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, 183 ಸಹಾಯಕ ಎಂಜಿನಿಯರ್‌ಗಳು ಮತ್ತು 24 ಕಿರಿಯ ಎಂಜಿನಿಯರ್‌ಗಳ ಸೇವಾ ದಾಖಲೆಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ಕೋರಿದ್ದಾರೆ.

ADVERTISEMENT

880 ಎಂಜಿನಿಯರ್‌ಗಳು ಪ್ರೊಬೇಷನರಿ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ವಿವರ, ವಿವಿಧ ಹಂತಗಳಲ್ಲಿ ಇಲಾಖಾ ಪರೀಕ್ಷೆ ಮತ್ತು ಕನ್ನಡ ಭಾಷಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ದಾಖಲೆ, ಬಡ್ತಿ ಪಟ್ಟಿಯಲ್ಲಿರುವ ಎಂಜಿನಿಯರ್‌ಗಳ ವಿರುದ್ಧ ಇಲಾಖಾ ವಿಚಾರಣೆ, ಕ್ರಿಮಿನಲ್‌ ಮೊಕದ್ದಮೆ ಮತ್ತು ನ್ಯಾಯಾಂಗ ವಿಚಾರಣೆ ಬಾಕಿ ಇದ್ದಲ್ಲಿ ಮಾಹಿತಿ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಎಂಜಿನಿಯರ್‌ಗಳ ಇಲಾಖಾವಾರು ಹಂಚಿಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 2020ರ ಅಕ್ಟೋಬರ್‌ ತಿಂಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲೋಕೋಪಯೋಗಿ, ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಗಳಿಗೆ ಎಂಜಿನಿಯರ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಆ ಬಳಿಕ ಆಯಾ ಇಲಾಖೆಗಳಲ್ಲಿ ಲಭ್ಯವಿರುವ ಹುದ್ದೆಗಳ ಆಧಾರದಲ್ಲಿ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.