ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ಹಾಗೂ ದೂರ ಸಂಪರ್ಕ ಇಲಾಖೆಗೆ ನಷ್ಟ ಉಂಟು ಮಾಡುತ್ತಿದ್ದ ಆರೋಪದಡಿ ಅಶ್ರಫ್ ಉಣಿಚಿರವಿಟ್ಟಿಲ್ (33) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಕೇರಳದ ಅಶ್ರಫ್, ಕೆಲ ವರ್ಷಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಚಿಕ್ಕ ಬಾಣಾವರದಲ್ಲಿ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಅಂಗಡಿ ಸಮೀಪದಲ್ಲೇ ಬಾಡಿಗೆ ಮನೆಯೊಂದನ್ನು ಮಾಡಿದ್ದ ಆರೋಪಿ, ಅಲ್ಲಿಯೇ ಕರೆಗಳ ಮಾರ್ಪಾಡು ಕೃತ್ಯ ಎಸಗುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ಕರೆಗಳ ಮಾರ್ಪಾಡು ಬಗ್ಗೆ ಪರಿಣಿತಿ ಹೊಂದಿದ್ದ ಆರೋಪಿ, ಕೃತ್ಯಕ್ಕಾಗಿ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್ ಬಳಸುತ್ತಿದ್ದರು.’
‘ಸಿಮ್ ಕಾರ್ಡ್‌ಗಳು, ಕಂಪ್ಯೂಟರ್, ಮೊಬೈಲ್ ಹಾಗೂ ಕೇಬಲ್‌ಗಳನ್ನು ಬಳಸಿ ಎಫ್‌ಸಿಟಿ ಬಾಕ್ಸ್ ಸಿದ್ಧಪಡಿಸಿಕೊಂಡಿದ್ದರು. ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಸಿಮ್ ಕಾರ್ಡ್‌ಗಳನ್ನು ಎಫ್‌ಟಿಸಿ ಬಾಕ್ಸ್, ಮೋಡಮ್ ಹಾಗೂ ರೂಟರ್‌ಗೆ ಸಂಪರ್ಕ ಕೊಟ್ಟಿದ್ದರು. ಅದೇ ಉಪಕರಣದ ಮೂಲಕ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿ ಕರೆಗಳಿಗೆ ಪರಿವರ್ತಿಸುತ್ತಿದ್ದರು. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ಅನ್ವಯವಾಗುತ್ತಿತ್ತು’ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.