ಬೆಂಗಳೂರು: ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ನಂದಿ ಬೆಟ್ಟದ ಸಮೀಪ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣದ ನಿಯೋಜಿತ ಕಾರ್ಯಕ್ರಮ ನಡೆಸಲು ಈಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಕಳೆದ ವಿಚಾರಣೆಯಲ್ಲಿ, ‘ಕಾಮಗಾರಿ ಕೈಗೊಳ್ಳದಂತೆ, ಲೋಹದ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಮತ್ತು ಹಬ್ಬದ ದಿನಗಳಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜನರು ಜಮಾಯಿಸದಂತೆ ನಿರ್ಬಂಧಿಸಬೇಕು’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ (ಪಿಐಎಲ್) ಮಧ್ಯಂತರ ಮನವಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್, ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.
ಈ ಆದೇಶವನ್ನು ತೆರವುಗೊಳಿಸುವಂತೆ ಕೋರಿದ್ದ ಈಶಾ ಯೋಗ ಕೇಂದ್ರದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಈಶಾ ಯೋಗ ಕೇಂದ್ರದ ಪರ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಹಾಗೂ ವಕೀಲ ಪಿ.ಎನ್. ಮನಮೋಹನ್, ‘ಅರ್ಜಿದಾರರು ಕೆಲವು ವಾಸ್ತವ ಅಂಶಗಳನ್ನು ಮರೆಮಾಚಿ ಮಧ್ಯಂತರ ಆದೇಶ ಪಡೆದಿದ್ದಾರೆ. ಈ ಸ್ಥಳದಲ್ಲಿ ಇದೇ 15ರಂದು ಕಾರ್ಯಕ್ರಮ ನಡೆಸಲು ಈ ಹಿಂದೆಯೇ ನಿರ್ಣಯಿಸಲಾಗಿದ್ದು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ’ ಎಂದು ವಿವರಿಸಿದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಎಂ.ಶಿವಕುಮಾರ್, ‘ಈಶಾ ಯೋಗ ಕೇಂದ್ರವು ಈ ಭೂ ಪ್ರದೇಶದಲ್ಲಿ ಅಪಾರವಾದ ಅರಣ್ಯ ಹಾನಿಗೆ ಕಾರಣವಾಗಿದೆ. ಪ್ರತಿವಾದಿಗಳು ಉಪರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಹೆಸರು ಬಳಕೆ ಮಾಡಿಕೊಂಡು ತಮ್ಮ ರಾಜಕೀಯ ಪ್ರಭಾವ ತೋರಿಸುತ್ತಿದ್ದಾರೆ’ ಎಂದು ದೂರಿದರು.
ಇದನ್ನು ಆಲಿಸಿದ ಪೀಠವು, ‘ಕಾರ್ಯಕ್ರಮದ ತುರ್ತನ್ನು ಪರಿಗಣಿಸಿ ಇದೇ 11ರಂದು ಮಾಡಿದ್ದ ಆದೇಶವು 15ರಂದು ನಡೆಸಲಿರುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಉಳಿದಂತೆ ಯಥಾಸ್ಥಿತಿ ಕಾಪಾಡುವಂತೆ ಮಾಡಿರುವ ಆದೇಶ ಮುಂದುವರಿಯಲಿದೆ’ ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರುವರಿ 2ಕ್ಕೆ ಮುಂದೂಡಿತು. ಆದಿಯೋಗಿ ಪ್ರತಿಮೆ ಸ್ಥಾಪನೆ ಮತ್ತು ಸಂಬಂಧಿತ ಕಾಮಗಾರಿ ಪ್ರಶ್ನಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಚಂಬಳ್ಳಿಯ ಕೃಷಿಕ ಎಸ್.ಕ್ಯಾತಪ್ಪ, ಮುಸ್ಟೂರು ಗ್ರಾಮದ ಜಿ.ಎಂ.ಶ್ರೀಧರ ಸೇರಿದಂತೆ ನಾಲ್ವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.