ಬೊಮ್ಮನಹಳ್ಳಿ: ‘ಮಾನವ ರಹಿತ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿರುವ ಇಸ್ರೊ, ಮಾನವ ಸಹಿತ ಬಾಹ್ಯಾಕಾಶ ಉಡಾವಣೆಗೆ ಸಿದ್ಧವಾಗುತ್ತಿದೆ’ ಎಂದು ವಿಜ್ಞಾನಿ ಎ.ಎಸ್.ಕಿರಣ್ ಕುಮಾರ್ ಹೇಳಿದರು.
ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದರಾಷ್ಟ್ರೀಯ ಮಟ್ಟದ ‘ಪ್ರಾಜೆಕ್ಟ್ ಎಕ್ಸ್‌ಪೋ- 2019’ ಉದ್ಘಾಟಿಸಿ ಅವರು ಮಾತನಾಡಿದರು.
‘ಬಾಹ್ಯಾಕಾಶ ಯೋಜನೆಗಳ ಅನುಷ್ಠಾನ ನಿಂತಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಆರ್ಥಿಕ ಹೊರೆಯಾಗದಂತೆ, ಬಾಹ್ಯಾಕಾಶ ಯೋಜನಾ ವೆಚ್ಚ ತಗ್ಗಿಸಿ, ಇರುವ ಸಂಪನ್ಮೂಲದಲ್ಲೇ ಹೊಸ ಯೋಜನೆಗಳನ್ನು ಕೈಗೊಳ್ಳುವ ಪ್ರಯತ್ನವೂ ನಡೆಯುತ್ತಿದೆ’ ಎಂದರು.
‘ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಬಾಹ್ಯಾಕಾಶ ಅಧ್ಯಯನದತ್ತ ಮುಖ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಕೃಷಿ, ಆರೋಗ್ಯ, ಶಿಕ್ಷಣ, ಮಿಲಿಟರಿ ಹಾಗೂ ರೋಬೊಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.
ಪ್ರಾಜೆಕ್ಟ್ ಎಕ್ಸ್‌ಪೋ ಮತ್ತು ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.