ADVERTISEMENT

ಐಟಿ, ಬಿಟಿ: ₹ 51 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ: ಸಚಿವ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:38 IST
Last Updated 25 ಜೂನ್ 2024, 15:38 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐ.ಟಿ ಮತ್ತು ಬಿ.ಟಿ) ಇಲಾಖೆಯ ಉನ್ನತಮಟ್ಟದ ನಿಯೋಗವು ಅಮೆರಿಕ, ಬ್ರಿಟನ್‌, ಜರ್ಮನಿ ಮತ್ತು ಫ್ರಾನ್ಸ್‌ ರಾಷ್ಟ್ರಗಳಲ್ಲಿ ಕೈಗೊಂಡ ಪ್ರವಾಸದ ಫಲವಾಗಿ ರಾಜ್ಯಕ್ಕೆ ₹ 51,000 ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ ಎಂದು ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಜೂನ್‌ 4ರಿಂದ 7ರವರೆಗೆ ಅಮೆರಿಕದಲ್ಲಿ ಮತ್ತು ಜೂನ್‌ 10ರಿಂದ 14ರವರೆಗೆ ಬ್ರಿಟನ್‌, ಜರ್ಮನಿ ಹಾಗೂ ಫ್ರಾನ್ಸ್‌ನಲ್ಲಿ ತಮ್ಮ ನೇತೃತ್ವದ ನಿಯೋಗವು ವಿವಿಧ ತಂತ್ರಜ್ಞಾನ, ವಾಣಿಜ್ಯ ಸಮಾವೇಶಗಳಲ್ಲಿ ಭಾಗವಹಿಸಿ ಹೂಡಿಕೆ ಆಕರ್ಷಣೆಗೆ ನಡೆಸಿದ ಪ್ರಯತ್ನಗಳ ಕುರಿತು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ನಮ್ಮ ನಿಯೋಗವು ಲಂಡನ್‌ ಟೆಕ್‌ ವೀಕ್‌, ಆ್ಯನ್ನೆ ಇಂಟರ್‌ನ್ಯಾಷನಲ್‌ ಅನಿಮೇಷನ್‌ ಫೆಸ್ಟಿವಲ್‌ (ಫ್ರಾನ್ಸ್‌), ಬಯೋ ಯುಎಸ್‌–2024 (ಸ್ಯಾನ್‌ ಡಿಯಾಗೊ) ಮತ್ತು ಜರ್ಮನಿಯ ಕೆಲವೆಡೆ ಭೇಟಿ ನೀಡಿ ಹೂಡಿಕೆದಾರರ ಜತೆ ಮಾತುಕತೆ ನಡೆಸಿದೆ. ಹೂಡಿಕೆಗೆ ಆಸಕ್ತಿ ತೋರಿ ಬಂದಿರುವ ಪ್ರಸ್ತಾವಗಳನ್ನು ರಾಜ್ಯ ಉನ್ನತಮಟ್ಟದ ಒಪ್ಪಿಗೆ ಸಮಿತಿ ಮುಂದೆ ಮಂಡಿಸಲಾಗುವುದು. ಕೆಲವು ಹೂಡಿಕೆದಾರರು ಸಹಾಯಧನಕ್ಕೆ ಈಗಾಗಲೇ ಅರ್ಜಿಗಳನ್ನೂ ಸಲ್ಲಿಸಿದ್ದಾರೆ’ ಎಂದರು.

‘ಈ ಬಾರಿ ನಿರ್ದಿಷ್ಟ ಗುರಿಗಳೊಂದಿಗೆ ಹೂಡಿಕೆದಾರರನ್ನು ಭೇಟಿಮಾಡಿದ್ದೇವೆ. ಹೀಗಾಗಿ ಹೂಡಿಕೆ ಆಕರ್ಷಣೆ ಫಲ ನೀಡುವ ವಿಶ್ವಾಸವಿದೆ. 180 ದಿನಗಳೊಳಗೆ ಹೂಡಿಕೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸುವ ಗುರಿ ಇದೆ’ ಎಂದು ತಿಳಿಸಿದರು.

ಕರ್ನಾಟಕದ ಮಾನವ ಸಂಪನ್ಮೂಲಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕರ್ನಾಟಕವು ಗುಜರಾತ್‌, ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಭಾರತದ ರಾಜ್ಯಗಳ ಜತೆ ಸ್ಪರ್ಧೆ ನಡೆಸುತ್ತಿಲ್ಲ. ಅಮೆರಿಕ, ಚೀನಾ, ವಿಯೆಟ್ನಾಂ ಮತ್ತು ಯುರೋಪ್‌ ರಾಷ್ಟ್ರಗಳ ಜತೆ ಸ್ಪರ್ಧಿಸುತ್ತಿದೆ. ಭವಿಷ್ಯದ ತಂತ್ರಜ್ಞಾನಗಳಿಗೆ ಪೂರಕವಾಗಿ ಸೃಷ್ಟಿಯಾಗುವ ಉದ್ಯೋಗಗಳನ್ನು ಪಡೆಯುವುದಕ್ಕೆ ರಾಜ್ಯದ ಯುವಜನರನ್ನು ತಯಾರು ಮಾಡಬೇಕಿದೆ ಎಂದರು.

ಬೆಂಗಳೂರಿಗೆ ಲಾಭ: ನಿಯೋಗದಲ್ಲಿದ್ದ ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, ‘ಸ್ಟ್ಯಾನ್‌ಫೋರ್ಡ್‌ ಬೈಯರ್ಸ್‌ ಸೆಂಟರ್‌ ಫಾರ್‌ ಬಯೋಡಿಸೈನ್‌ನ ‘ಫೌಂಡರ್ಸ್‌ ಫೋರಂ’ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದರಲ್ಲಿ ಸೇರಿದೆ. ಸ್ಟ್ಯಾನ್‌ಫೋರ್ಡ್‌ ಬೈಯರ್ಸ್‌ ತಂಡವು ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಲಿದೆ. ಇದರಿಂದ ಬೆಂಗಳೂರಿಗೆ ಲಾಭವಾಗಲಿದೆ’ ಎಂದು ಹೇಳಿದರು.

ಲಂಡನ್‌ನ ಸ್ಟಾರ್ಟ್‌ ಅಪ್‌ ಜೆನೋಮ್‌ನ ಯೋಜನೆಯಡಿ ಕರ್ನಾಟಕದ 100 ನವೋದ್ಯಮಗಳು ಅನುಕೂಲ ಪಡೆಯಲಿವೆ ಎಂದರು.

ಐಟಿ ಮತ್ತು ಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.