ಬೆಂಗಳೂರು: ಬಹುರೂಪವೇ ಭಾರತೀಯ ಸಂಸ್ಕೃತಿ. ಅದನ್ನು ಗುರುತಿಸದವರು, ಏಕರೂಪ ಹೇರುವ ಸಂಕುಚಿತ ಮನಸ್ಥಿತಿಯವರು ಭಾರತೀಯರೆಂದು ಕರೆಸಿಕೊಳ್ಳಲು ಅನರ್ಹರು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಪ್ರತಿಪಾದಿಸಿದರು.
ಬರಗೂರು ರಾಮಚಂದ್ರಪ್ಪ 75 ವರ್ಷ ದಾಟಿದ ಪ್ರಯುಕ್ತ ಬರಗೂರು ಸ್ನೇಹಬಳಗ ಭಾನುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ನೇಹಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವು ಬಹುಭಾಷೆ, ಬಹುಸಂಸ್ಕೃತಿಯಿಂದ ಕೂಡಿದೆ. ಒಂದು ಪ್ರಧಾನ ಸಂಸ್ಕೃತಿ, ಪ್ರಧಾನ ಭಾಷೆ ಎಂಬುದಿಲ್ಲ. ಎಲ್ಲವೂ ಪ್ರಧಾನ ಸಂಸ್ಕೃತಿ, ಭಾಷೆಗಳೇ ಆಗಿವೆ. ಎಲ್ಲ ಭಾಷೆಗಳನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು. ಆಯಾ ರಾಜ್ಯಗಳು ರಾಜ್ಯದ ಭಾಷೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಬರಗೂರು ಅವರ ವ್ಯಕ್ತಿತ್ವವು ಬಂಡಾಯಕ್ಕೆ ಸೀಮಿತವಾದುದಲ್ಲ. ಅದನ್ನು ಮೀರಿ ಬೆಳೆದವರು. ಬಹುಮುಖಿ ಚಿಂತನೆಯ ಅವರು ಬಹುತ್ವದ ರಾಷ್ಟ್ರೀಯ ವಕ್ತಾರ ಎಂದು ಬಣ್ಣಿಸಿದರು.
ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್ ಮಾತನಾಡಿ, ‘ಪ್ರಜಾಪ್ರಭುತ್ವ, ಜಾತ್ಯತೀತ, ಸಮಾಜವಾದಿ, ಸಾರ್ವಭೌಮ ತತ್ವಗಳನ್ನು ಇಟ್ಟುಕೊಂಡು ಅನೇಕರೊಂದಿಗೆ ಚರ್ಚಿಸಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದರು. ಇಂದು ಈ ತತ್ವಗಳಿಗೆ ಸಂಚಕಾರ ಬಂದಿದೆ. ಸಮಾನತೆ ಮತ್ತು ಅವಕಾಶಗಳು ಎಲ್ಲರಿಗೂ ಸರಿಯಾಗಿ ಸಿಗಬೇಕು ಎಂಬ ಚಿಂತನೆಗೆ ತೊಡಕು ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮರಾಠಿ ಲೇಖಕ ಶರಣಕುಮಾರ್ ಲಿಂಬಾಳೆ ಮಾತನಾಡಿ, ‘ಬರಗೂರು ಕೇವಲ ಬರಹಗಾರನಲ್ಲ, ಅವರೊಬ್ಬ ಸಾಮಾಜಿಕ ಕಾರ್ಯಕರ್ತನೂ ಹೌದು. ಶರಣ ಚಳವಳಿಯ ಆಧುನಿಕ ರೂಪವೇ ಬಂಡಾಯ ಸಾಹಿತ್ಯ’ ಎಂದು ವಿಶ್ಲೇಷಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಸುಳ್ಳಿನ ಸಾಮ್ರಾಜ್ಯವನ್ನೇ ಕಟ್ಟುವವರ ಮುಂದೆ ಸತ್ಯ ಸೋಲು ಕಾಣಬಹುದು ಎಂಬ ಆತಂಕವಿದೆ. ಈ ಕಾಲದಲ್ಲಿ ಬರಹಗಾರ ಮಾತ್ರವಲ್ಲ, ಎಲ್ಲ ಮರ್ಯಾದಸ್ಥ ಮನುಷ್ಯರು ಜನರಿಗೆ ಸತ್ಯ, ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವೀಯತೆಯನ್ನು ಮುಟ್ಟಿಸುವ ಸೇತುವೆಗಳಾಗಬೇಕು. ಕಟ್ಟ ಕಡೆಯ ವ್ಯಕ್ತಿಗೆ ಗೌರವ ನೀಡುವುದೇ ಮೊಟ್ಟ ಮೊದಲ ಆದ್ಯತೆಯಾಗಬೇಕು’ ಎಂದು ತಿಳಿಸಿದರು.
ಯಲ್ಲಪ್ಪ ಹಿಮ್ಮಡಿ ಸಂಪಾದಿಸಿದ ‘ಬರಗೂರ್ ಬುಕ್’ ಮತ್ತು ರಾಜು ಗುಂಡಾಪುರ, ಬಿ.ರಾಜಶೇಖರಮೂರ್ತಿ ಸಂಪಾದಿಸಿದ ‘ನಮ್ಮ ಬರಗೂರ್ ಮೇಸ್ಟ್ರು’ ಕೃತಿಗಳನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಜನಾರ್ಪಣೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.