ADVERTISEMENT

ಕಾಂಗ್ರೆಸ್ ಪಕ್ಷ ಸರಿದಾರಿಗೆ ತರುವ ಜವಾಬ್ದಾರಿಯಿದೆ: ಎಲ್.ಎನ್. ಮುಕುಂದರಾಜ್

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:22 IST
Last Updated 16 ಜೂನ್ 2024, 16:22 IST
‘ಡಾ.ಎಲ್. ಹನುಮಂತಯ್ಯ–65; ಬದುಕು ಬರಹ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಲ್. ಹನುಮಂತಯ್ಯ ಮತ್ತು ವಿಜಯಾಂಬಿಕೆ ದಂಪತಿಗೆ ರಂಗ ಗೌರವ ಸಲ್ಲಿಸಲಾಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ, ವಿದ್ಯಾರಣ್ಯ, ಭಾಗವತರು ಸಂಘಟನೆಯ ಕೆ. ರೇವಣ್ಣ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತು ಎಲ್.ಎನ್. ಮುಕುಂದರಾಜ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
‘ಡಾ.ಎಲ್. ಹನುಮಂತಯ್ಯ–65; ಬದುಕು ಬರಹ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಲ್. ಹನುಮಂತಯ್ಯ ಮತ್ತು ವಿಜಯಾಂಬಿಕೆ ದಂಪತಿಗೆ ರಂಗ ಗೌರವ ಸಲ್ಲಿಸಲಾಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ, ವಿದ್ಯಾರಣ್ಯ, ಭಾಗವತರು ಸಂಘಟನೆಯ ಕೆ. ರೇವಣ್ಣ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತು ಎಲ್.ಎನ್. ಮುಕುಂದರಾಜ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೂರಾರು ವರ್ಷಗಳ ಚರಿತ್ರೆಯಿರುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದೆ. ಇವತ್ತು ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂತವರ ಮೇಲಿದೆ. ನಾವು ಕೊಳೆಗೇರಿಗೂ, ಕಾಂಗ್ರೆಸ್ ಕಚೇರಿಗೂ ಹೋಗಲು ತಯಾರಿದ್ದೇವೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ಭಾಗವತರು ಸಾಂಸ್ಕೃತಿಕ ಸಂಘಟನೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಡಾ.ಎಲ್. ಹನುಮಂತಯ್ಯ–65; ಬದುಕು ಬರಹ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಈ ಕಾಲದಲ್ಲಿ ಲೇಖಕರಿಗೂ ಜನರಿಗೂ ಸಂಬಂಧ ಇಲ್ಲವೆನೋ ಎನ್ನುವಂತಾಗಿದೆ. ಸಾಹಿತಿಗಳಾದವರು ದಂತಗೋಪುರದಲ್ಲಿ ಇರಬೇಕು, ಅವರು ಎಲ್ಲಿಗೂ ಹೋಗಬಾರದೆಂಬ ಭಾವನೆಯಿದೆ. ಪ್ರಭುತ್ವಕ್ಕೂ ಮತ್ತು ಸಾಹಿತ್ಯಕ್ಕೂ ಮೊದಲಿನಿಂದಲೂ ಸಂಬಂಧವಿದೆ. ನಾವು ಎಲ್ಲರ ಬಳಿಯೂ ಹೋಗಬೇಕಾಗುತ್ತದೆ. ಸಾಹಿತ್ಯ ಅಕಾಡೆಮಿಯು ವಿದ್ವತ್ ವಲಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಜನರ ತೆರಿಗೆ ಹಣದಿಂದ ನಡೆಯುವ ಸಂಸ್ಥೆ. ಆ ಸಾಹಿತ್ಯವನ್ನು ಕನ್ನಡದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಜವಾಬ್ದಾರಿ ಸಾಹಿತಿಗಳ ಮೇಲಿದೆ’ ಎಂದು ತಿಳಿಸಿದರು.  

ADVERTISEMENT

ಕವಿ ಎಚ್‌.ಎಸ್. ಶಿವಪ್ರಕಾಶ್, ‘ಸಾಹಿತಿಗಳು ದೊಡ್ದ ದೊಡ್ಡ ಮಾತನಾಡುತ್ತಾರೆ. ಆದರೆ, ಅವರು ಕಷ್ಟ ಕಾಲದಲ್ಲಿ ನೆರವಿಗೆ ಬರುವುದಿಲ್ಲ. ಇದಕ್ಕೆ ಹನುಮಂತಯ್ಯ ಅವರು ಅಪವಾದ. ಸಾಹಿತಿಗಳಿಗೆ ಕನಸುಗಳಿದ್ದರೂ ಅದನ್ನು ನನಸು ಮಾಡುವ ಶಕ್ತಿ ಇರುವುದಿಲ್ಲ. ರಾಜಕಾರಣಿಗಳಿಗೆ ಶಕ್ತಿ ಇದ್ದರೂ ಕನಸುಗಳು ಇರುವುದಿಲ್ಲ. ಹನುಮಂತಯ್ಯ ಅವರು ಸಾಹಿತ್ಯ ಸೃಷ್ಟಿಯ ಜತೆಗೆ ರಾಜಕೀಯದಲ್ಲಿಯೂ ಮುಂದೆ ಬಂದರು. ಅವರು ಸಂಸತ್ತಿನಲ್ಲಿ ಅತ್ಯಂತ ಧೈರ್ಯವಾಗಿ ಹಾಗೂ ಜನಪರವಾಗಿ ಮಾತನಾಡುತ್ತಿದ್ದರು’ ಎಂದು ತಿಳಿಸಿದರು. 

ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್, ‘ದಲಿತ ಹಿನ್ನೆಲೆಯಿಂದ ಬಂದ ಎಲ್.ಹನುಮಂತಯ್ಯ ಅವರು ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಉತ್ತಮ ರಾಜಕೀಯ ಪಟುವಾಗಿದ್ದಾರೆ. ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದಾಗ ಸದನದಲ್ಲಿ ಉತ್ತಮವಾಗಿ ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಅವರ ವಾಕ್ ಚಾತುರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅವರನ್ನು ರಾಜ್ಯಸಭೆಯ ಸದಸ್ಯರಾಗಿ ಮುಂದುವರಿಸಬೇಕಿತ್ತು’ ಎಂದು ಹೇಳಿದರು. 

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಗಾಯನ ಹಾಗೂ ರಂಗ ಗೌರವ ನಡೆಯಿತು. ಹನುಮಂತಯ್ಯ ಅವರ ಬದುಕು ಹಾಗೂ ಬರಹಗಳ ಬಗ್ಗೆ ಚರ್ಚೆಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.