ADVERTISEMENT

ಐ.ಟಿ ದಾಳಿ | ₹ 4.8 ಕೋಟಿ ಜಪ್ತಿ: ಕೆ. ಸುಧಾಕರ್ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:37 IST
Last Updated 26 ಏಪ್ರಿಲ್ 2024, 15:37 IST
<div class="paragraphs"><p>ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್</p></div>

ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್

   

ಬೆಂಗಳೂರು: ‘ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಲಾಗಿತ್ತು’ ಎನ್ನಲಾದ ₹4.8 ಕೋಟಿಯನ್ನು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಜಪ್ತಿ ಮಾಡಿದ್ದು, ಈ ಹಣವನ್ನು ವಾಪಸು ಕೊಡಿಸುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಸ್‌ಎಸ್‌ಟಿ ಅಧಿಕಾರಿ ದಶರಥ್ ವಿ. ಕುಮಾರ್ ಅವರು ಚುನಾವಣೆ ಅಕ್ರಮದ ಬಗ್ಗೆ ದೂರು ನೀಡಿದ್ದರು. ಆರಂಭದಲ್ಲಿ, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ’ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಐಪಿಸಿ 171 ಇ (ಲಂಚ ಸ್ವೀಕಾರ), ಐಪಿಸಿ 171 ಎಫ್‌ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರುವಿಕೆ), ಐಪಿಸಿ 171 ಬಿ (ಮತದಾರರಿಗೆ ಹಣದ ಆಮಿಷ), ಐಪಿಸಿ 171 ಸಿ (ಚುನಾವಣೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ) ಆರೋಪದಡಿ ಡಾ. ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಜಿಲ್ಲಾ ಮಾದರಿ ನೀತಿ ಸಂಹಿತೆ (ಎಂಸಿಸಿ) ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಹಾಗೂ ಆದಾಯ ತೆರಿಗೆ ಅಧಿಕಾರಿ ಆನಂದ್ ರಟ್ಕಲ್ ಅವರ ವಾಟ್ಸ್‌ಆ್ಯಪ್‌ಗೆ ಸುಧಾಕರ್ ಸಂದೇಶ ಕಳುಹಿಸಿದ್ದರೆಂದು ಹೇಳಲಾಗಿದೆ. ಮೊಬೈಲ್ ನಂಬರ್ ಹಾಗೂ ಸಂದೇಶದ ಸ್ಕ್ರಿನ್ ಶಾರ್ಟ್‌ಗಳನ್ನು ದೂರುದಾರರು ನೀಡಿದ್ದಾರೆ. ಕಾನೂನು ತಜ್ಞರ ಸಲಹೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ದೂರಿನ ವಿವರ: ‘ಮುನೀಶ್ ಮೌದ್ಗಿಲ್ ಅವರ ಮೊಬೈಲ್‌ಗೆ ಏಪ್ರಿಲ್ 25ರಂದು ಬೆಳಿಗ್ಗೆ 11.44 ಗಂಟೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು, ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಿಗೆ ಹಂಚಲೆಂದು ಸ್ಥಳವೊಂದರಲ್ಲಿ ₹10 ಕೋಟಿ ಸಂಗ್ರಹಿಸಲಾಗಿದೆ’ ಎಂದಿದ್ದರು. ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದ ಮೌದ್ಗಿಲ್ ಅವರು ಸ್ಥಳದ ನಿಖರ ವಿಳಾಸ ಪತ್ತೆ ಮಾಡುವಂತೆ ಸೂಚಿಸಿದ್ದರು’ ಎಂದು ದೂರಿನಲ್ಲಿ ದಶರಥ್‌ ಕುಮಾರ್ ಅವರು ಉಲ್ಲೇಖಿಸಿದ್ದಾರೆ.

‘ಜಿಲ್ಲಾ ಚುನಾವಣಾಧಿಕಾರಿ, ಐ.ಟಿ. ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಯಿತು. ಮಾದಾವರದಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಹಣವಿರುವ ಮಾಹಿತಿ ಲಭ್ಯವಾಗಿತ್ತು. ಮನೆ ಮೇಲೆ ದಾಳಿ ಮಾಡಿದ್ದ ಐ.ಟಿ ಇಲಾಖೆ ಅಧಿಕಾರಿಗಳು, ₹4.8 ಕೋಟಿ ಜಪ್ತಿ ಮಾಡಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಲಂಚವಾಗಿ ನೀಡಲು ಹಣ ಸಂಗ್ರಹಿಸಿದ್ದ ಮೊತ್ತ ಇದು ಎಂಬುದು ಮೇಲ್ನೋಟಕ್ಕೆ ಮನವರಿಕೆಯಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಏಪ್ರಿಲ್ 25ರಂದು ಮಧ್ಯಾಹ್ನ 2.04 ಗಂಟೆಗೆ ಮುನೀಶ್ ಮೌದ್ಗಿಲ್ ಅವರ ಮೊಬೈಲ್‌ಗೆ (94******15) 9845****40 ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಬಂದಿತ್ತು. ಜೊತೆಗೆ, ಇದೇ ಸಂಖ್ಯೆಯಿಂದ ಮೌದ್ಗಿಲ್ ಅವರಿಗೆ ಎರಡು ಬಾರಿ ಹಾಗೂ ಆದಾಯ ತೆರಿಗೆ ಅಧಿಕಾರಿ ಆನಂದ್ ಅವರಿಗೆ ಒಂದು ಬಾರಿ ಸಂದೇಶವೂ ಬಂದಿತ್ತು. ‘ಮಾದಾವರ ಗೋವಿಂದಪ್ಪ ಐಟಿ ಟೀಮ್’, ‘ದಯವಿಟ್ಟು ಸಹಾಯ ಮಾಡಿ, ನಿಮಗೆ ನಾನು ಚಿರಋಣಿ’ ಎಂಬುದಾಗಿ ಸಂದೇಶದಲ್ಲಿ ಬರೆಯಲಾಗಿತ್ತು. ಆನಂದ್ ಅವರಿಗೂ ಪ್ರತ್ಯೇಕ ಸಂದೇಶ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟ ಸ್ಕ್ರಿನ್ ಶಾರ್ಟ್‌ಗಳನ್ನು ಲಗತ್ತಿಸಲಾಗಿದೆ. ವಾಟ್ಸ್‌ಆ್ಯಪ್ ಕರೆ ಹಾಗೂ ಸಂದೇಶ ಬಂದಿದ್ದ ಮೊಬೈಲ್‌ ನಂಬರ್ ಪರಿಶೀಲಿಸಿದಾಗ, ಅದು ಸುಧಾಕರ್ ಹೆಸರಿನಲ್ಲಿರುವುದು ಗೊತ್ತಾಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅನುಚಿತ ಪ್ರಭಾವ ಬೀರಿದ್ದಾರೆ. ಮತದಾರರಿಗೆ ಲಂಚ ನೀಡಲು ಹಾಗೂ ಭ್ರಷ್ಟಾಚಾರಕ್ಕೆ ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ದಶರಥ್ ಕುಮಾರ್ ಅವರು ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.