ಬೆಂಗಳೂರು: ಇಲ್ಲಿನ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಕೃಷ್ಣಪ್ಪ ಅವರ ಫ್ಲ್ಯಾಟ್‌ನಲ್ಲಿ ಸಂಗ್ರಹಿಸಿಟ್ಟಿದ್ದ ₹45 ಕೋಟಿಗೂ ಹೆಚ್ಚು ಮೊತ್ತದ ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಗುರುವಾರದಿಂದ ಆರಂಭವಾದ ಐ.ಟಿ ಶೋಧ ಭಾನುವಾರವೂ ಮುಂದುವರಿಯಿತು. ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯಲ್ಲಿ ಗುತ್ತಿಗೆದಾರರು, ಉದ್ಯಮಿಗಳು, ವಾಸ್ತುಶಿಲ್ಪಿಗಳ ಮನೆಗಳಿಂದ ₹100 ಕೋಟಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಬೆಳಿಗ್ಗೆ ನಗರದ ವಿವಿಧೆಡೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶನಿವಾರ ಸಂಜೆಯವರೆಗೆ 45 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಭಾನುವಾರ ಕೂಡ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಮಾಡಿದ ಐ.ಟಿ ಅಧಿಕಾರಿಗಳು, ಇಡೀ ದಿನ ಶೋಧ ನಡೆಸಿದ್ದಾರೆ.
ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಐದನೇ ಮಹಡಿಯಲ್ಲಿ ಸಂತೋಷ್ ಕೃಷ್ಣಪ್ಪ ಹೊಂದಿರುವ ಫ್ಲ್ಯಾಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿದ್ದರು. ಭಾನುವಾರ ತಡರಾತ್ರಿಯಾದರೂ ಶೋಧ ಪೂರ್ಣಗೊಂಡಿರಲಿಲ್ಲ.
ಸಂತೋಷ್ ಕೃಷ್ಣಪ್ಪ ಕೆಲವು ರಾಜಕೀಯ ಮುಖಂಡರೊಂದಿಗೆ ನಂಟು ಹೊಂದಿದ್ದರು. ಭಾರಿ ಪ್ರಮಾಣದ ನಗದು ಸಂಗ್ರಹಿಸಿ ಇಟ್ಟುಕೊಂಡಿರುವ ಸುಳಿವು ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಕಬ್ಬಿಣದ ಪೆಟ್ಟಿಗೆಗಳಲ್ಲಿ (ಟ್ರಂಕ್) ನಗದು, ಚಿನ್ನಾಭರಣ ಮತ್ತು ದಾಖಲೆಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಎಲ್ಲ ಪೆಟ್ಟಿಗೆಗಳನ್ನೂ ವಶಕ್ಕೆ ಪಡೆದು ಕೊಂಡೊಯ್ದಿರುವ ತನಿಖಾಧಿಕಾರಿಗಳು, ನಗದು ಎಣಿಕೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಸ್ತುಶಿಲ್ಪಿಯೊಬ್ಬರ ಮನೆ ಮೇಲೆ ಶನಿವಾರ ಬೆಳಿಗ್ಗೆ ದಾಳಿಮಾಡಿದ್ದ ಐ.ಟಿ ಅಧಿಕಾರಿಗಳು ಶೋಧ ನಡೆಸಿದ್ದರು. ಅಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿತ್ತು. ಆ ಕಾರ್ಯಾಚರಣೆಯಲ್ಲಿ ಲಭಿಸಿದ ಸುಳಿವನ್ನು ಆಧರಿಸಿ ಕೇತಮಾರನಹಳ್ಳಿಯ ಫ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿತ್ತು.
ಮತ್ತಷ್ಟು ಕಡೆ ಶೋಧ
ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಸುತ್ತಿರುವವರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸರಣಿಯೋಪಾದಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಗುರುವಾರ ಆರಂಭವಾದ ದಾಳಿಯಲ್ಲಿ ಸಿಕ್ಕ ಸುಳಿವುಗಳನ್ನು ಆಧರಿಸಿ ಕಾರ್ಯಾಚರಣೆ ಮುಂದುವರಿಯುತ್ತಲೇ ಇದೆ.
ದೆಹಲಿ, ಮುಂಬೈ, ಚೆನ್ನೈ, ಗೋವಾ ಸೇರಿದಂತೆ ದೇಶದ ವಿವಿಧೆಡೆಯಿಂದ ಆದಾಯ ತೆರಿಗೆ ಇಲಾಖೆಯ ನೂರಾರು ಅಧಿಕಾರಿಗಳು ಬುಧವಾರವೇ ಬೆಂಗಳೂರು ತಲುಪಿದ್ದರು. ಗುರುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಆರಂಭಿಸಿದ್ದರು. ಇನ್ನೂ ಅವರೆಲ್ಲರೂ ನಗರದಲ್ಲೇ ಬೀಡುಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.