ADVERTISEMENT

ಬಿಬಿಎಂಪಿ ಗುತ್ತಿಗೆದಾರ ಸೇರಿ ಹಲವರ ಮನೆ ಮೇಲೆ ಐಟಿ ದಾಳಿ: ₹ 42 ಕೋಟಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 20:58 IST
Last Updated 13 ಅಕ್ಟೋಬರ್ 2023, 20:58 IST
ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರ ಮಗ ಪ್ರದೀಪ್ ಮನೆಯಲ್ಲಿ ಪತ್ತೆಯಾದ ರಟ್ಟಿನ ಬಾಕ್ಸ್‌ಗಳಲ್ಲಿದ್ದ ₹ 20 ಕೋಟಿ ನಗದು
ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರ ಮಗ ಪ್ರದೀಪ್ ಮನೆಯಲ್ಲಿ ಪತ್ತೆಯಾದ ರಟ್ಟಿನ ಬಾಕ್ಸ್‌ಗಳಲ್ಲಿದ್ದ ₹ 20 ಕೋಟಿ ನಗದು   

ಬೆಂಗಳೂರು: ರಾಜ್ಯದ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ 45ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಒಟ್ಟು ₹ 42 ಕೋಟಿ ನಗದು ಜಪ್ತಿ ಮಾಡಿದ್ದಾರೆ.

ತೆರಿಗೆ ವಂಚನೆ ಆರೋಪದಡಿ ರಾಜ್ಯದ ಎರಡು ಗುತ್ತಿಗೆ ಕಂಪನಿಗಳು ಹಾಗೂ 10ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದ ಅಧಿಕಾರಿಗಳು, ಶುಕ್ರವಾರ ರಾತ್ರಿಯೂ ಶೋಧ ಮುಂದುವರಿಸಿದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌. ಅಂಬಿಕಾಪತಿ ಮನೆ ಹಾಗೂ ಕುಟುಂಬಸ್ಥರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಅಂಬಿಕಾಪತಿ ಮಗ ಪ್ರದೀಪ್ ಮನೆಯಲ್ಲಿ ₹ 20 ಕೋಟಿ ನಗದು ಜಪ್ತಿ ಮಾಡಿದ್ದಾರೆ.

ADVERTISEMENT

ರಾಜ್ಯದ ಹಲವು ಸರ್ಕಾರಿ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಕಂಪನಿಗೆ ಸಂಬಂಧಪಟ್ಟ ಹೈದರಾಬಾದ್‌ನ ಸ್ಥಳದಲ್ಲೂ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಈ ಸ್ಥಳದಲ್ಲಿ ₹ 15 ಕೋಟಿ ನಗದು ಪತ್ತೆ ಆಗಿರುವುದಾಗಿ ಗೊತ್ತಾಗಿದೆ.

‘ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ರಾತ್ರಿಯವರೆಗೆ ಅಂಬಿಕಾಪತಿ ಮಗ ಪ್ರದೀಪ್ ಮನೆಯಲ್ಲಿ ₹ 20 ಕೋಟಿ, ಹೈದರಾಬಾದ್‌ನಲ್ಲಿ ₹ 15 ಕೋಟಿ ಸೇರಿದಂತೆ ಒಟ್ಟು ₹ 42 ಕೋಟಿ ನಗದು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ದಾಳಿಗಳನ್ನು ಮಾಡಲಾಗಿದೆ. ನಗದು ಜೊತೆಯಲ್ಲಿ ಸಾಕಷ್ಟು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಹಲವು ಗುತ್ತಿಗೆದಾರರ ಮನೆಗಳಲ್ಲಿ ಶನಿವಾರವೂ ಶೋಧ ಮುಂದುವರಿಯಲಿದೆ ’ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರ ಮಗ ಪ್ರದೀಪ್ ಮನೆಯ ಮಂಚದ ಅಡಿಯಲ್ಲಿದ್ದ ಹಣವನ್ನು ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಹೊರಗೆ ತೆಗೆದರು

ಮಂಚದ ಅಡಿ 21 ರಟ್ಟಿನ ಬಾಕ್ಸ್‌ಗಳಲ್ಲಿ ₹20 ಕೋಟಿ

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರೂ ಆಗಿರುವ ಅಂಬಿಕಾಪತಿ ಹಾಗೂ ಕುಟುಂಬಸ್ಥರ ಮನೆಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಗುರುವಾರ ದಾಳಿ ಮಾಡಿದರು. ಅಂಬಿಕಾಪತಿ–ಪತ್ನಿ ಅಶ್ವತಮ್ಮ ವಾಸವಿರುವ ಮಾನ್ಯತಾ ಟೆಕ್‌ಪಾರ್ಕ್‌ ಬಳಿ ಮನೆ ಮಗ ಪ್ರದೀಪ್ ವಾಸವಿರುವ ಆರ್‌.ಟಿ.ನಗರ ಸುಲ್ತಾನ್‌ಪಾಳ್ಯದಲ್ಲಿರುವ ಮನೆ ಇನ್ನೊಬ್ಬ ಮಗನ ಮನೆ ಹಾಗೂ ಇತರೆ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದರು.

ಮಗ ಪ್ರದೀಪ್‌ ಮನೆಯ ಎಲ್ಲ ಕಡೆ ತಪಾಸಣೆ ನಡೆಸಿದ ಐಟಿ ಅಧಿಕಾರಿಗಳು ಮಂಚದ ಕೆಳಗೆ ಬಚ್ಚಿಟ್ಟಿದ್ದ ರಟ್ಟಿನ 21 ಬಾಕ್ಸ್‌ ಹಾಗೂ 1 ಬ್ಯಾಗ್‌ಗಳನ್ನು ಪತ್ತೆ ಹಚ್ಚಿದ್ದರು. ಬಾಕ್ಸ್‌ ಹಾಗೂ ಬ್ಯಾಗ್‌ಗಳಲ್ಲಿ ₹ 500 ಮುಖ ಬೆಲೆಯ ನೋಟುಗಳ ಕಂತೆಗಳು ಇದ್ದವು. ಇದೇ ಮನೆಯಲ್ಲಿ ₹ 20 ಕೋಟಿಯನ್ನು ಅಧಿಕಾರಿಗಳು ಸುಪರ್ದಿಗೆ ಪಡೆದರು.

‘ಹಣದ ಹಿಂದೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’

ಆದಾಯ ತೆರಿಗೆ ಇಲಾಖೆ ಬಿಬಿಎಂಪಿ ಗುತ್ತಿಗೆದಾರನ ಮಗನ ಮನೆಯಲ್ಲಿ ವಶಪಡಿಸಿಕೊಂಡಿರುವ ₹ 42 ಕೋಟಿ ಸಂಗ್ರಹದ ಹಿಂದೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಇದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಹಣ ತೆಲಂಗಾಣ ಚುನಾವಣೆಗೆ ಕಳುಹಿಸಲು ಸಂಗ್ರಹಿಸಿದ್ದು ಎನ್ನುವ ಮಾಹಿತಿ ಇದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆ ಪಕ್ಷದ ಹೈಕಮಾಂಡ್‌ಗೆ ಹಬ್ಬ. ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ ಇತರೆ ರಾಜ್ಯಗಳ ಚುನಾವಣಾ ಖರ್ಚಿಗೆ ಬೇಕಾದ ಹಣವನ್ನು ಹೈಕಮಾಂಡ್‌ಗೆ ನೀಡಲು ಕಾಂಗ್ರೆಸ್‌ ರಾಜ್ಯ ಘಟಕ  ಸಂಗ್ರಹ ಮಾಡುತ್ತಿದೆ. ಐಟಿ ದಾಳಿಯಿಂದ ಗುಟ್ಟು ರಟ್ಟಾಗಿದೆ. ಕಾಂಗ್ರೆಸ್‌ ಪರ್ಸಂಟೇಜ್‌ ವ್ಯವಹಾರವೂ ಸಾಬೀತಾಗಿದೆ ಎಂದು ದೂರಿದ್ದಾರೆ. ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿ ₹650 ಕೋಟಿ ಬಿಡುಗಡೆ ಮಾಡಿದ ಬೆನ್ನಲೇ ₹ 42 ಕೋಟಿ ಸಿಗುತ್ತದೆ. ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಬಿಐ ಇಡಿ ಸೇರಿದಂತೆ ಯಾವ ತನಿಖೆಗೆ ವಹಿಸುತ್ತಾರೆ ಎಂದು ಕುಟುಕಿದ್ದಾರೆ.

ರಾಜಕೀಯ ಪ್ರೇರಿತ ದಾಳಿ: ಡಿ.ಕೆ.ಶಿವಕುಮಾರ್

ಕರ್ನಾಟಕದಲ್ಲಷ್ಟೇ ಅಲ್ಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲೂ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪ್ರಸ್ತುತ ದೇಶದಲ್ಲಿ ರಾಜಕೀಯ ಉದ್ದೇಶವಿಲ್ಲದೆ  ಐಟಿ ದಾಳಿ ನಡೆಯುವುದಿಲ್ಲ. ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಕಳಿಸಲಾಗುತ್ತಿದೆ ಎಂಬ ಆರೋಪವೂ ಸತ್ಯವಲ್ಲ. ಹಾದಿಬೀದಿಯಲ್ಲಿ ಹೋಗುವವರ ಮಾತಿಗೆ ಉತ್ತರಿಸುವ ಅಗತ್ಯವೂ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.