ADVERTISEMENT

ಲೈನ್‌ಮನ್ ಹುದ್ದೆಗೆ ಐಟಿಐ ವಿದ್ಯಾರ್ಹತೆ ನಿಗದಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 17:00 IST
Last Updated 16 ನವೆಂಬರ್ 2024, 17:00 IST
   

ಬೆಂಗಳೂರು: ಲೈನ್‌ಮನ್ ಮತ್ತು ಸ್ಟೇಷನ್ ಅಟೆಂಡರ್‌ ಹುದ್ದೆಗಳ ಭರ್ತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿ ಬದಲಿಗೆ ಐಟಿಐ ಶಿಕ್ಷಣವನ್ನು ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ ಒತ್ತಾಯಿಸಿದೆ.

ಸಂಘದ ರಾಜ್ಯಾಧ್ಯಕ್ಷ ಎಸ್.ಎಂ. ನೆರಬೆಂಚಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದೀಗ ಕೆಪಿಟಿಸಿಎಲ್‌ನಿಂದ 2,975 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ನಿಗದಿ ಮಾಡಿರುವುದು ಸರಿಯಲ್ಲ’ ಎಂದು ಹೇಳಿದರು.

ವಿದ್ಯುತ್‌ ನಿಗಮಗಳಲ್ಲಿನ ಕೆಲಸ ಅಪಾಯಕಾರಿಯಾಗಿದ್ದು, ಐಟಿಐ ಅಭ್ಯರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಆದರೆ, ಎಸ್‌ಎಸ್‌ಎಲ್‌ಸಿ ಮಾಡಿದವರಿಗೆ ಈ ಬಗ್ಗೆ ಯಾವುದೇ ತರಬೇತಿ ಇರುವುದಿಲ್ಲ. 2016ರಿಂದಲೂ ಎಸ್‌ಎಸ್‌ಎಲ್‌ಸಿಯನ್ನೇ ಮಾನದಂಡವನ್ನಾಗಿಸಿಕೊಂಡು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್‌ ಅವಘಡಕ್ಕೆ ಸಿಲುಕಿ ಜೀವ ಕಳೆದುಕೊಂಡವರ, ಅಂಗವಿಕಲರ ಸಂಖ್ಯೆ ಹೆಚ್ಚಾಗಲು ಇದು ಕಾರಣ ಎಂದು ತಿಳಿಸಿದರು.

ADVERTISEMENT

ವಿದ್ಯುತ್ ಆಧಾರಿತ ಕೆಲಸಗಳ ಬಗ್ಗೆ ಜ್ಞಾನ ಹಾಗೂ ಕೌಶಲ ಹೊಂದಿರುವ ಐಟಿಯ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು. ಇಲ್ಲದೇ ಇದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಎ.ಎ. ಪಾಟೀಲ್, ಋಶ್ಯಶೃಂಗ, ಅನಿಲ್‌ಕುಮಾರ್, ಐಟಿಐ ಅಭ್ಯರ್ಥಿಗಳಾದ ಸುನೀಲ್, ಯಮನೂರಿ ಮಾದರ, ಉಮೇಶ್ ಸಿ.ಪಿ., ಅನಿಲ್ ಕುಮಾರ್ ಡಿ., ಎಚ್.ಯು.ಅಶೋಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.