ADVERTISEMENT

ಆನೆ ದಂತ ಮಾರಾಟ: ಆರು ಮಂದಿ ಸೆರೆ

ಡಿಎಂಕೆ ಮುಖಂಡ ಭಾಗಿ: ಮೂರು ಆನೆಗಳನ್ನು ಕೊಂದಿರುವ ಅನುಮಾನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 19:49 IST
Last Updated 28 ಜೂನ್ 2018, 19:49 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಆನೆದಂತಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಡಿಎಂಕೆ ಪಕ್ಷದ ಮುಖಂಡ ಖಾದರ್ ಬಾಷಾ ಸೇರಿದಂತೆ ಆರು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನಿಂದ ದಂತಗಳನ್ನು ತಂದಿದ್ದ ಧರ್ಮಪುರಿ ಜಿಲ್ಲೆಯ ನವೀನ್ ಹಾಗೂ ಕೃಷ್ಣಗಿರಿಯ ಪ್ರಕಾಶ್ ಎಂಬುವರು, ಕೆಂಪೇಗೌಡ ನಗರದ ಹೊರವರ್ತುಲ ರಸ್ತೆಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಅದೇ ವೇಳೆ ದಾಳಿ ಮಾಡಿ, 2 ದಂತಗಳ 4 ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಖಾದರ್ ಬಾಷಾ ಹಾಗೂ ಸಹಚರರಾದ ಜಾವೀದ್, ಶಬರೀನಾಥ್, ಸತೀಶ್‌ ಕುಮಾರ್‌ ಅವರನ್ನೂ ಬಂಧಿಸಲಾಯಿತು. ಅವರ ಬಳಿಯಿಂದ 4 ದಂತಗಳ 8 ತುಣುಕುಗಳನ್ನು ಜಪ್ತಿ ಮಾಡಲಾಗಿದೆ. ಅವರೆಲ್ಲರನ್ನೂ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು.

ADVERTISEMENT

12 ತುಣುಕುಗಳು: 6 ದಂತಗಳನ್ನು ಆರೋಪಿಗಳು 12 ತುಣುಕುಗಳನ್ನಾಗಿ ಮಾಡಿದ್ದಾರೆ. ಅದಕ್ಕಾಗಿ ಮೂರು ಆನೆಗಳನ್ನು ಕೊಂದಿರುವ ಅನುಮಾನವಿದ್ದು, ಆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕೃಷ್ಣಗಿರಿ ಜಿಲ್ಲೆಯ ಖಾದರ್, ಸ್ಥಳೀಯವಾಗಿ ಪೆಟ್ರೋಲ್ ಬಂಕ್‌ ಇಟ್ಟುಕೊಂಡಿದ್ದಾರೆ. ತಮ್ಮ ಸಹಚರರ ಮೂಲಕ ದಂತಗಳನ್ನು ಮಾರಾಟ ಮಾಡಿಸುತ್ತಿದ್ದರು ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ ಎಂದರು.

ಆರೋಪಿಗಳು ಬೆಂಗಳೂರಿನಲ್ಲಿ ಯಾರಿಗೆ ದಂತಗಳನ್ನು ಮಾರಾಟ ಮಾಡಲು ಬಂದಿದ್ದರು ಎಂಬುದು ಗೊತ್ತಾಗಿಲ್ಲ. ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಆರೋಪಿಗಳನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.